ಮಾಸ್ಕೋ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ‘ನಿಕಿ ಮಿನಾಜ್ ಸ್ಟಿಲೆಟ್ಟೊ ಚಾಲೆಂಜ್’ಗೆ ಪ್ರಯತ್ನಿಸುವಾಗ ರಷ್ಯಾದ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರು ಗಂಭೀರ ಗಾಯಕ್ಕೊಳಗಾಗಿದ್ದಾರೆ. ಅಡುಗೆಮನೆಯ ಕೌಂಟರ್‌ನಿಂದ ಕಾಲುಜಾರಿ ಬಿದ್ದ ಅವರು ಬೆನ್ನುಮೂಳೆ ಮುರಿದುಕೊಂಡಿದ್ದಾರೆ. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ @mariana_vasiuc ಎಂಬ ಬಳಕೆದಾರ ಹೆಸರಿನಿಂದ ಕರೆಯಲ್ಪಡುವ ಈ ರಷ್ಯಾದ ಇನ್‌ಫ್ಲುಯೆನ್ಸರ್, ಈ ಸವಾಲನ್ನು ಸ್ವೀಕರಿಸಲು ನಿರ್ಧರಿಸಿದರು. ಸ್ಟಿಲೆಟ್ಟೊ ಚಾಲೆಂಜ್‌ಗಾಗಿ ಅವರು ಅಡುಗೆಮನೆಯ ಕೌಂಟರ್‌ಗೆ ಹತ್ತಿದರು. ಒಂದು ಕಾಲಿನ ಮೇಲೆ ಯಾವುದೇ ಬೆಂಬಲವಿಲ್ಲದೆ, ಒಂದು ಪಾತ್ರೆ ಮತ್ತು ಪ್ರೊಟೀನ್ ಪೌಡರ್‌ನೊಂದಿಗೆ ಕುಳಿತುಕೊಂಡರು. ಆದರೆ, ಕೆಳಗಿಳಿಯುವ ವೇಳೆಯಲ್ಲಿ ಕಾಲುಜಾರಿ ಕೆಳಗೆ ಬಿದ್ದರು. ಇದರಿಂದ ಅವರ ಬೆನ್ನುಮೂಳೆಗೆ ಗಂಭೀರ ಗಾಯವಾಯಿತು.
ವಿಶೇಷವೆಂದರೆ, ಈ ಘಟನೆಯ ಯುವತಿಯು ಮಗುವಿಗೆ ಜನ್ಮ ನೀಡಿದ ಕೆಲವೇ ವಾರಗಳ ನಂತರ ಸಂಭವಿಸಿದೆ. ಈ ಕಾರಣದಿಂದಾಗಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಮಾತ್ರವಲ್ಲ, ಆಕೆಯ ನವಜಾತ ಶಿಶುವಿನ ಯೋಗಕ್ಷೇಮದ ಬಗ್ಗೆಯೂ ಕಾಳಜಿಯನ್ನು ತೋರಿದ್ದಾರೆ. ಈ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ, ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ರೀಲ್ ಪೋಸ್ಟ್ ಮಾಡಿದ್ದಾರೆ. “ನಾನು ಚೆನ್ನಾಗಿದ್ದೇನೆ, ಇದು ಕೇವಲ ಸಣ್ಣ ಮುರಿತವಷ್ಟೇ. ನನ್ನ ಮಗು ಆರೋಗ್ಯವಾಗಿದ್ದು, ಇಬ್ಬರು ದಾದಿಯರು ಅದರ ಆರೈಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಬಿದ್ದ ಸಮಯದಲ್ಲೂ ಒಬ್ಬ ದಾದಿ ಮಗುವಿನ ಜೊತೆಗಿತ್ತು,” ಎಂದು ಆಕೆ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
‘ನಿಕಿ ಮಿನಾಜ್ ಸ್ಟಿಲೆಟ್ಟೊ ಚಾಲೆಂಜ್’ ಎಂಬುದು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾದ ಟ್ರೆಂಡ್ ಆಗಿದೆ. ಈ ಸವಾಲು 2013ರಲ್ಲಿ ನಿಕಿ ಮಿನಾಜ್ ಅವರ ‘ಹೈಸ್ಕೂಲ್’ ಹಾಡಿನ ಮ್ಯೂಸಿಕ್ ವಿಡಿಯೊದ ಒಂದು ದೃಶ್ಯದಿಂದ ಪ್ರೇರಿತವಾಗಿದೆ. ಆ ದೃಶ್ಯದಲ್ಲಿ, ನಿಕಿ ಮಿನಾಜ್ ಹೀಲ್ಸ್ ಧರಿಸಿ, ಈಜುಕೊಳದ ಪಕ್ಕದಲ್ಲಿ ಒಂದು ಕಾಲನ್ನು ಇನ್ನೊಂದರ ಮೇಲೆ ಹಾಕಿಕೊಂಡು ಕುಳಿತಿರುವ ಭಂಗಿಯನ್ನು ತೋರಿಸಲಾಗಿದೆ. ಈ ಭಂಗಿಯನ್ನು ಅನುಕರಿಸಲು ಹಲವರು ಪ್ರಯತ್ನಿಸಿದ್ದಾರೆ. ಆದರೆ ಈ ರಷ್ಯಾದ ಇನ್‌ಫ್ಲುಯೆನ್ಸರ್‌ಗೆ ಇದು ದುರಂತವಾಗಿ ಪರಿಣಮಿಸಿದೆ.