ಬೆಂಗಳೂರು: ಬೆಂಗಳೂರಿನಲ್ಲಿ ಕಾರು ಓಡಿಸುವ ವಿಚಾರಕ್ಕೆ ಒಡಿಶಾ ಮೂಲದ ಯುವತಿಯೊಬ್ಬಳು ಕನ್ನಡಿಗರನ್ನು “ತಲೆಯಲ್ಲಿ ಬುದ್ಧಿಯಿಲ್ಲ, ಲದ್ದಿ ಇದೆ” ಎಂದು ಅವಮಾನಕಾರಿಯಾಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹೇಳಿಕೆಯಿಂದ ಕನ್ನಡಿಗರು ಆಕ್ರೋಶಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ.
ಒಡಿಶಾದ ನೇಹಾ ಬಿಸ್ವಾಲ್ ಎಂಬ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಸ್ಥಳೀಯ ಪಿಜಿಯೊಂದರಲ್ಲಿ ವಾಸವಾಗಿದ್ದಾಳೆ. ಮಳೆಯ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ಚಾಲಕರು ವೇಗವಾಗಿ ಓಡಿಸಿದ್ದರಿಂದ ರಸ್ತೆಯ ನೀರು ತನ್ನ ಮೇಲೆ ಸಿಡಿದಿತು ಎಂದು ಆಕ್ರೋಶಗೊಂಡ ಆಕೆ, ಛತ್ರಿ ಹಿಡಿದುಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. “ಇಷ್ಟು ಮಳೆ ಬಂದರೂ ವಾಹನಗಳನ್ನು ವೇಗವಾಗಿ ಓಡಿಸುತ್ತಾರೆ, ಈ ನಗರದ ಜನರಿಗೆ ಬುದ್ಧಿಯೇ ಇಲ್ಲ, ಶಿಕ್ಷಣವಿದ್ದರೂ ಅನಕ್ಷರಸ್ಥರಂತೆ ವರ್ತಿಸುತ್ತಾರೆ” ಎಂದು ವಿಡಿಯೋದಲ್ಲಿ ಧಿಮಾಕಿನಿಂದ ಮಾತನಾಡಿದ್ದಾಳೆ. “ಛೀ-ಥೂ” ಎಂದು ಉಗಿದ ಈ ಯುವತಿಯ ಮಾತುಗಳು ಕನ್ನಡಿಗರ ಕೆಂಗಾಲಿಗೆ ಗುರಿಯಾಗಿವೆ.
ಅನ್ಯರಾಜ್ಯದ ಯುವತಿಯ ಹೇಳಿಕೆಗೆ ಕನ್ನಡಿಗರ ಆಕ್ರೋಶ:
ನೇಹಾ ಬಿಸ್ವಾಲ್‌ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆಗೈದು, ಟ್ರೋಲ್ ಪೇಜ್‌ಗಳಲ್ಲಿ ಯುವತಿಯ ಮಾತುಗಳನ್ನು ತೀವ್ರವಾಗಿ ಖಂಡಿಸಲಾಗಿದೆ. ಬೆಂಗಳೂರು ಎಲ್ಲರಿಗೂ ಆತಿಥ್ಯ ನೀಡುವ, ಕೆಲಸದ ಅವಕಾಶ ಕಲ್ಪಿಸುವ ನಗರವಾಗಿದ್ದರೂ, ಇಂತಹ ಅವಮಾನಕಾರಿ ಹೇಳಿಕೆಗಳು ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತಂದಿವೆ ಎಂದು ಜನರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟೀಕೆ:
ಕನ್ನಡಿಗರು ಈ ಯುವತಿಯ ವಿರುದ್ಧ ಕೌಂಟರ್ ಕಾಮೆಂಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ. “ಬೆಂಗಳೂರಿನಲ್ಲಿ ಕೆಲಸ ಮಾಡಿ, ಇಲ್ಲಿನ ಸೌಕರ್ಯವನ್ನು ಆನಂದಿಸುವವರು ನಮ್ಮನ್ನೇ ಟೀಕಿಸುವುದು ಸರಿಯಲ್ಲ” ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿವಾದವು ಬೆಂಗಳೂರಿನ ಜನರ ಜೀವನ ಶೈಲಿ ಮತ್ತು ವಾಹನ ಚಾಲನೆಯ ಕುರಿತಾದ ಚರ್ಚೆಗೆ ಕಾರಣವಾಗಿದೆ.