ಮೈಸೂರು: ಮೈಸೂರು ನಗರದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತಲೂ ಸಮಾನ ಅಥವಾ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಆಡಳಿತದಿಂದ ಮೈಸೂರು ಸಂಸ್ಥಾನವನ್ನು ವಿಶ್ವದಾದ್ಯಂತ ಮಾದರಿಯಾಗಿ ರೂಪಿಸಿದರು. ಜನಪರ ಆಡಳಿತದಿಂದ ಕನ್ನಡಿಗರ ಹೃದಯದಲ್ಲಿ ಅವರು ಅಮರರಾಗಿದ್ದಾರೆ. ಅವರ ಕೊಡುಗೆಗಳು ನಮ್ಮ ಕಣ್ಣೆದುರಿಗಿವೆ” ಎಂದು ತಿಳಿಸಿದರು.
ಯದುವೀರ್ ಮುಂದುವರೆದು, “ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ, ಅವರ ಅನುದಾನಗಳು ಸಮಾಜಕ್ಕೆ ಎಷ್ಟು ತಲುಪಿವೆ ಎಂಬುದನ್ನು ಜನರು ಗಮನಿಸಿದ್ದಾರೆ. 2018ರ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಜನರು ಇದಕ್ಕೆ ಉತ್ತರ ನೀಡಿದ್ದಾರೆ” ಎಂದು ತಿರುಗೇಟು ನೀಡಿದರು.
“ನಾಲ್ವಡಿ ಅವರು ತಮ್ಮ ಆಡಳಿತದಲ್ಲಿ ಸುವರ್ಣಯುಗ ಸೃಷ್ಟಿಸಿದರು. ಅವರ ಸಾಧನೆಯನ್ನು ಗೌರವಿಸಬೇಕೇ ಹೊರತು, ರಾಜಕೀಯ ಕಾರಣಕ್ಕಾಗಿ ಹೋಲಿಕೆ ಮಾಡಬಾರದು. ಯತೀಂದ್ರ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು” ಎಂದು ತಾಕೀತು ಮಾಡಿದರು.