ರಾಯಚೂರು: ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಿಂಗಪ್ಪ ಅವರನ್ನು ಕರ್ತವ್ಯ ಲೋಪ, ದುರ್ನಡತೆ, ಮತ್ತು ಬೇಜವಾಬ್ದಾರಿತನದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಈ ಘಟನೆ ಸಾರ್ವಜನಿಕವಾಗಿ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಶಿಕ್ಷಣ ಇಲಾಖೆಯನ್ನು ಕ್ರಮಕ್ಕೆ ಒತ್ತಾಯಿಸಿತು.
ನಿಂಗಪ್ಪ, ಕಂಠಪೂರ್ತಿ ಮದ್ಯಪಾನ ಮಾಡಿ ಶಾಲೆಯ ಬಿಸಿಯೂಟದ ಅಡುಗೆ ಕೋಣೆಯ ಬಾಗಿಲ ಬಳಿ ಮಲಗಿದ್ದ ಘಟನೆ ಸ್ಥಳೀಯರ ಗಮನಕ್ಕೆ ಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಅವರು ತನಿಖೆ ನಡೆಸಿ ಅಮಾನತು ಆದೇಶ ಹೊರಡಿಸಿದರು. ಇದರ ಜೊತೆಗೆ, ನಿಂಗಪ್ಪ ಅವರು ಬಿಸಿಯೂಟದ ಅಡುಗೆ ಮಾಡುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪವೂ ದೃಢಪಟ್ಟಿದೆ.
ಗ್ರಾಮಸ್ಥರು ಮತ್ತು ಪೋಷಕರು ಈ ಹಿಂದೆಯೂ ನಿಂಗಪ್ಪ ಅವರ ವಿರುದ್ಧ ದೂರುಗಳನ್ನು ಸಲ್ಲಿಸಿದ್ದರು, ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. “ನಿತ್ಯವೂ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದರು, ಇದು ಮಕ್ಕಳಿಗೆ ಮತ್ತು ಶಾಲೆಯ ವಾತಾವರಣಕ್ಕೆ ಕೆಟ್ಟ ಪರಿಣಾಮ ಬೀರಿತ್ತು,” ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಶಿಕ್ಷಣ ಇಲಾಖೆ ತಕ್ಷಣವೇ ಕ್ರಮಕೈಗೊಂಡಿದೆ.
ಈ ಘಟನೆಯು ಶಾಲೆಯ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಶ್ನೆಗಳನ್ನು ಎತ್ತಿದೆ. “ಮಕ್ಕಳ ಮುಂದೆ ಇಂತಹ ವರ್ತನೆ ಸರಿಯೇ?” ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.