ತಮಿಳುನಾಡು 25 ಜುಲೈ 2025: ತೂಕ ಕಡಿಮೆ ಮಾಡಲು ಯೂಟ್ಯೂಬ್‌ನಲ್ಲಿ ನೋಡಿದ ಡಯಟ್ ಪ್ಲಾನ್ ಅನುಸರಿಸಿದ ವಿದ್ಯಾರ್ಥಿಯೊಬ್ಬ 3 ತಿಂಗಳ ನಂತರ ಸಾವನ್ನಪ್ಪಿದ್ದಾನೆ. ಈ ಘಟನೆ ತಮಿಳುನಾಡಿನ ಕನ್ಯಾಕುಮಾರಿಯ ಬರ್ನಾಥ್‌ವಿಲೈನಲ್ಲಿ ನಡೆದಿದೆ. ಕನ್ಯಾಕುಮಾರಿಯ ಬರ್ನಾಥ್‌ವಿಲೈ ನಿವಾಸಿಯಾಗಿದ್ದ 17 ವರ್ಷದ ಶಕ್ತಿಸ್ಟರ್ ಎಂಬ ಯುವಕ ಮೃತ ದುರ್ದೈವಿ.
ಕಳೆದ ಮೂರು ತಿಂಗಳಿಂದ ಶಕ್ತಿಸ್ಟರ್ ತೂಕ ಇಳಿಕೆಗಾಗಿ ಕೇವಲ ಹಣ್ಣಿನ ರಸವನ್ನು ಕುಡಿಯುತ್ತಿದ್ದನು. ಯೂಟ್ಯೂಬ್‌ನಲ್ಲಿನ ವಿಡಿಯೋಗಳ ಸೂಚನೆಯಂತೆ, ಇತರ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಹಣ್ಣಿನ ರಸ ಮತ್ತು ವ್ಯಾಯಾಮದ ಮೇಲೆ ಗಮನ ಹರಿಸಿದ್ದನು.ಆತನ ಸಹವಿದ್ಯಾರ್ಥಿಗಳು ತನ್ನ ದೇಹದ ತೂಕದ ಬಗ್ಗೆ ಗೇಲಿ ಮಾಡುವ ಭಯದಿಂದ ಈ ಕಠಿಣ ಡಯಟ್‌ಗೆ ಒಳಗಾಗಿದ್ದನು. ಆದರೆ, ಈ ಡಯಟ್‌ನಿಂದ ಅವನ ಆರೋಗ್ಯ ಕ್ಷೀಣಿಸತೊಡಗಿತ್ತು. ಶೀತ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡವು. ಇದರ ಗಂಭೀರತೆಯನ್ನು ಅರಿಯದೆ, ಅವನು ಡಯಟ್ ಮುಂದುವರೆಸಿದನು.
ಗುರುವಾರ (ಜುಲೈ 24, 2025) ಬೆಳಿಗ್ಗೆ, ಶಕ್ತಿಸ್ಟರ್ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಮನೆಯಲ್ಲಿ ಕುಸಿದು ಬಿದ್ದನು. ಕುಟುಂಬದವರು ತಕ್ಷಣ ಅವನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಅವನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶಕ್ತಿಸ್ಟರ್‌ನ ಸಾವಿಗೆ ಕಾರಣವಾದ ಡಯಟ್‌ನ ಬಗ್ಗೆ ವಿವರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆಯಿಂದ ತಿಳಿದುಬಂದಿರುವಂತೆ, ಕೇವಲ ಹಣ್ಣಿನ ರಸದ ಡಯಟ್‌ನಿಂದ ಶಕ್ತಿಸ್ಟರ್‌ನ ದೇಹಕ್ಕೆ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗಿತ್ತು. ಇದು ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಿ, ಅಂತಿಮವಾಗಿ ಅವನ ಸಾವಿಗೆ ಕಾರಣವಾಯಿತು.