ಬೆಂಗಳೂರು: ಹುಬ್ಬಳ್ಳಿ ಮೂಲದ ಮಾಡೆಲ್ ಧ್ರುವ್ ನಾಯ್ಕ್ ಮೇಲೆ ಸೀ ಬರ್ಡ್ ಟ್ರಾವೆಲ್ಸ್ ಬಸ್ ಸಿಬ್ಬಂದಿಯಿಂದ ಹಲ್ಲೆ ಮತ್ತು ದುಬಾರಿ ವಸ್ತುಗಳ ಕಳ್ಳತನದ ಆರೋಪ ಕೇಳಿಬಂದಿದೆ. ಈ ಘಟನೆ ಜುಲೈ 1ರಂದು ರಾತ್ರಿ 11:30 ಸುಮಾರಿಗೆ ಬೆಂಗಳೂರಿನ ಆನಂದ್ ರಾವ್ ಸರ್ಕಲ್‌ನಲ್ಲಿ ನಡೆದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜುಲೈ 1 ರಂದು ಬೆಂಗಳೂರಿಗೆ ಆಗಮಿಸಿದ್ದ ಧ್ರುವ್ ನಾಯ್ಕ್, ರಾತ್ರಿ 11:30ಕ್ಕೆ ಹುಬ್ಬಳ್ಳಿಗೆ ತೆರಳಲು ಸೀ ಬರ್ಡ್ ಟ್ರಾವೆಲ್ಸ್ ಬಸ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಧ್ರುವ್ ತಮ್ಮ ಮೂವರು ಸ್ನೇಹಿತರೊಂದಿಗೆ ಸೀ ಬರ್ಡ್ ಕಚೇರಿ ಮುಂದೆ ಆಗಮಿಸಿದರು. ಇಬ್ಬರು ಸ್ನೇಹಿತರು ಬಸ್‌ನಲ್ಲಿ ಕುಳಿತಿದ್ದರೆ, ಧ್ರುವ್ ಮತ್ತೊಬ್ಬ ಸ್ನೇಹಿತನೊಂದಿಗೆ ಹೊರಗೆ ನಿಂತು ಸಿಗರೇಟ್ ಸೇದುತ್ತಿದ್ದರು.
ಈ ವೇಳೆ ಬಸ್‌ನ ಬಾಗಿಲು ಲಾಕ್ ಆಗಿ, ವಾಹನವು ನಿಧಾನವಾಗಿ ಚಲಿಸಲು ಆರಂಭಿಸಿತು. ಧ್ರುವ್ ಕೈಯಾಡಿಸಿ ಬಾಗಿಲು ತೆರೆಯುವಂತೆ ಮನವಿ ಮಾಡಿದರು. ಇದೇ ವಿಚಾರಕ್ಕೆ ಸೀ ಬರ್ಡ್ ಸಿಬ್ಬಂದಿಯೊಂದಿಗೆ ಗಲಾಟೆ ಉಂಟಾಯಿತು. ಗಲಾಟೆಯ ವೇಳೆ ಸಿಬ್ಬಂದಿಯು ಕೋಲು ಮತ್ತು ರಾಡ್‌ನಿಂದ ಧ್ರುವ್ ಮೇಲೆ ಹಲ್ಲೆ ಮಾಡಿದ ಆರೋಪವಿದೆ.
ಕಳ್ಳತನದ ಆರೋಪ:
ಹಲ್ಲೆಯ ಸಂದರ್ಭದಲ್ಲಿ ಧ್ರುವ್‌ರ ದುಬಾರಿ ವಸ್ತುಗಳಾದ 44,000 ರೂ. ಮೌಲ್ಯದ ಸನ್‌ಗ್ಲಾಸ್, 1.85 ಲಕ್ಷ ರೂ. ಬೆಲೆಯ ಪ್ಲಾಟಿನಂ ಪೆಂಡೆಂಟ್‌ನೊಂದಿಗಿನ ಸಿಲ್ವರ್ ಚೈನ್, 45,000 ರೂ. ಮೌಲ್ಯದ ವಾಚ್, 40,000 ರೂ. ಬೆಲೆಯ ಪ್ಲಾಟಿನಂ ರಿಂಗ್, ಪಾಸ್‌ಪೋರ್ಟ್, ದುಬಾರಿ ಶೂ, ಏರ್‌ಬರ್ಡ್ಸ್, ಮತ್ತು ಪರ್ಸ್‌ನಲ್ಲಿದ್ದ 10,000 ರೂ. ನಗದನ್ನು ಸಿಬ್ಬಂದಿ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಕುರಿತು ಧ್ರುವ್ ನಾಯ್ಕ್ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೀ ಬರ್ಡ್ ಟ್ರಾವೆಲ್ಸ್ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.





