ಅಹಮದಬಾದ್: ಇಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಫ್ಲೈಟ್ AI 171, ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರದ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ 110ಕ್ಕೂ ಹೆಚ್ಚು ಸಾವು-ನೋವುಗಳು ಸಂಭವಿಸಿವೆ ಎಂದು ವರದಿಯಾಗಿದ್ದು, ಇನ್ನಷ್ಟು ಮಾಹಿತಿ ಹೊರಬರಬೇಕಿದೆ.
ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ಟ್ವಿನ್ ಜೆಟ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊಂದಿತ್ತು. ಈ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್‌ವಾಲ್ (8,200 ಗಂಟೆಗಳ ಅನುಭವ) ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ (1,100 ಗಂಟೆಗಳ ಅನುಭವ) ನಿಯಂತ್ರಿಸುತ್ತಿದ್ದರು.
ವಿಮಾನದಲ್ಲಿ 117 ಜನ ವಯಸ್ಕರು, 11 ಮಕ್ಕಳು, 2 ಹಸುಗೂಸು ಇದ್ದ ಮಾಹಿತಿ ವರದಿಯಾಗಿದ್ದು, 169 ಭಾರತೀಯರು, 53 ಬ್ರಿಟನ್ ಪ್ರಜೆಗಳು , 7 ಪೋರ್ಚುಗೀಸರು, ಒಬ್ಬ ಕೆನಡಾ ಪ್ರಜೆ ಹಾಗೂ ಪೈಲೆಟ್ ಸೇರಿ 10 ಜನ ಸಿಬ್ಬಂದಿಗಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಕಂಟ್ರೋಲ್ ರೂಂ ಪ್ರಕಾರ, ಫ್ಲೈಟ್ AI 171 ಲಂಡನ್‌ನ ಗ್ಯಾಟ್‌ವಿಕ್‌ಗೆ ತೆರಳುತ್ತಿತ್ತು. ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಮೂಲಗಳ ಪ್ರಕಾರ, ಇಂದು, ಏರ್ ಇಂಡಿಯಾದ B787 ವಿಮಾನ VT-ANB, ಅಹಮದಾಬಾದ್‌ನಿಂದ ಗ್ಯಾಟ್‌ವಿಕ್‌ಗೆ ತೆರಳುವಾಗ, ಟೇಕ್‌ಆಫ್ ಆದ ಕೂಡಲೇ ಅಪಘಾತಕ್ಕೀಡಾಗಿದೆ. ವಿಮಾನವು ರನ್‌ವೇ 23 ರಿಂದ 13:39 IST (08:09 UTC) ಕ್ಕೆ ಟೇಕ್‌ಆಫ್ ಆಗಿತ್ತು. ಇದು ATC (ಏರ್ ಟ್ರಾಫಿಕ್ ಕಂಟ್ರೋಲ್) ಗೆ ‘ಮೇಡೇ’ ಕರೆಯನ್ನು ಮಾಡಿತು, ಆದರೆ ಆನಂತರ ATC ಯ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರನ್‌ವೇ 23 ರಿಂದ ಟೇಕ್‌ಆಫ್ ಆದ ಕೂಡಲೇ, ವಿಮಾನವು ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ನೆಲಕ್ಕೆ ಬಿದ್ದಿತು. ಅಪಘಾತದ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಏಳುತ್ತಿರುವುದು ಕಂಡುಬಂದಿದೆ.”
ಏರ್ ಇಂಡಿಯಾದ ಪ್ರತಿಕ್ರಿಯೆ
“ಫ್ಲೈಟ್ AI171, ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ವಿಮಾನವು ಇಂದು ಪತನಗೊಂಡಿದೆ. ಈ ಕ್ಷಣದಲ್ಲಿ ನಾವು ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ http://airindia.com ಮತ್ತು ನಮ್ಮ X ಹ್ಯಾಂಡಲ್‌ನಲ್ಲಿ ಮತ್ತಷ್ಟು ನವೀಕರಣಗಳನ್ನು ಹಂಚಿಕೊಳ್ಳುತ್ತೇವೆ,” ಎಂದು ಏರ್ ಇಂಡಿಯಾ ತಮ್ಮ X ಪೋಸ್ಟ್‌ನಲ್ಲಿ ತಿಳಿಸಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತ
ಈ ದುರಂತದಿಂದಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ಸೂಚನೆಯವರೆಗೆ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ತುರ್ತು ಸೇವೆಗಳು, ಅಗ್ನಿಶಾಮಕ ದಳ, ಮತ್ತು ವೈದ್ಯಕೀಯ ತಂಡಗಳು ಘಟನಾ ಸ್ಥಳದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.