ವ್ಯಾಟಿಕನ್ ಸಿಟಿ: ಕ್ಯಾಥೋಲಿಕ್ ಚರ್ಚಿನ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹೊಸ ಪೋಪ್ ಆಯ್ಕೆಯ ಸಮಾವೇಶವು ಮೇ 7, 2025 ರಿಂದ ವ್ಯಾಟಿಕನ್ ಸಿಟಿಯಲ್ಲಿ ಆರಂಭವಾಗಲಿದೆ. ಏಪ್ರಿಲ್ 21, 2025 ರಂದು ಅನಾರೋಗ್ಯದಿಂದ ನಿಧನರಾದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಏಪ್ರಿಲ್ 26 ರಂದು ನೆರವೇರಿತು. ಅಂತ್ಯಕ್ರಿಯೆಯ ಬಳಿಕ ಸೋಮವಾರ ನಡೆದ ಕಾರ್ಡಿನಲ್‌ಗಳ ಅನೌಪಚಾರಿಕ ಸಭೆಯಲ್ಲಿ 180 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಹೊಸ ಪೋಪ್ ಆಯ್ಕೆಯ ದಿನಾಂಕವನ್ನು ಘೋಷಿಸಲಾಯಿತು.
ಹೊಸ ಪೋಪ್ ಆಯ್ಕೆ ಪ್ರಕ್ರಿಯೆ
ಪೋಪ್ ನಿಧನರಾದ 15 ರಿಂದ 20 ದಿನಗಳ ಒಳಗೆ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವಿಶ್ವದ ವಿವಿಧ ಭಾಗಗಳಿಂದ ವ್ಯಾಟಿಕನ್‌ಗೆ ಆಗಮಿಸುತ್ತಾರೆ. ಕಾರ್ಡಿನಲ್ ಕಾಲೇಜು ಎಂದು ಕರೆಯಲ್ಪಡುವ 135 ಮಂದಿಯ ಗುಂಪು ಸಂತಾ ಮಾರ್ತಾದಲ್ಲಿ ಚರ್ಚೆ ನಡೆಸಿ, ಸಿಸ್ಟೀನ್ ಚಾಪೆಲ್‌ನಲ್ಲಿ ರಹಸ್ಯ ಮತದಾನವನ್ನು ನಡೆಸುತ್ತದೆ.
ಕಾರ್ಡಿನಲ್‌ಗಳು ತಮ್ಮ ಧಾರ್ಮಿಕ ಜ್ಞಾನ ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಒಬ್ಬ ಅಭ್ಯರ್ಥಿಯು ಮೂರನೇ ಎರಡರಷ್ಟು (2/3) ಮತಗಳನ್ನು ಪಡೆಯುವವರೆಗೆ ದಿನಕ್ಕೆ ಎರಡು ಬಾರಿ ಮತದಾನ ನಡೆಯುತ್ತದೆ. ಈ ಪ್ರಕ್ರಿಯೆ ಒಂದೇ ದಿನದಲ್ಲಿ ಮುಗಿಯದೇ ಇರಬಹುದು.
ರಹಸ್ಯ ಮತದಾನ
ಪೋಪ್ ಆಯ್ಕೆಯ ಮತದಾನವು ಅತ್ಯಂತ ರಹಸ್ಯವಾಗಿರುತ್ತದೆ. ಕಾರ್ಡಿನಲ್‌ಗಳನ್ನು ಸಿಸ್ಟೀನ್ ಚಾಪೆಲ್‌ನಲ್ಲಿ ಒಂದು ಸ್ಥಳಕ್ಕೆ ಸೀಮಿತಗೊಳಿಸಿ, ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದೊಂದಿಗೆ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗುತ್ತದೆ, ಮತ್ತು ಫೋನ್ ಸೌಲಭ್ಯವಿರುವುದಿಲ್ಲ. ಮತದಾನದ ಪತ್ರಗಳನ್ನು ರಹಸ್ಯವಾಗಿಡಲು ಸುಡಲಾಗುತ್ತದೆ.
ಕಪ್ಪು ಮತ್ತು ಬಿಳಿ ಹೊಗೆಯ ಸಂಕೇತ
ಪೋಪ್ ಆಯ್ಕೆಯ ಪ್ರಗತಿಯನ್ನು ಕಪ್ಪು ಮತ್ತು ಬಿಳಿ ಹೊಗೆಯ ಮೂಲಕ ಜನರಿಗೆ ತಿಳಿಸಲಾಗುತ್ತದೆ. ಯಾವುದೇ ಅಭ್ಯರ್ಥಿಯು 2/3 ಮತಗಳನ್ನು ಪಡೆಯದಿದ್ದರೆ, ಕಪ್ಪು ಹೊಗೆಯನ್ನು ಬಿಡಲಾಗುತ್ತದೆ, ಇದು ಆಯ್ಕೆ ಇನ್ನೂ ಪೂರ್ಣಗೊಳ್ಳದಿರುವುದನ್ನು ಸೂಚಿಸುತ್ತದೆ. ಒಬ್ಬ ಅಭ್ಯರ್ಥಿಯು ಆಯ್ಕೆಯಾದಾಗ, ಬಿಳಿ ಹೊಗೆಯನ್ನು ಬಿಡಲಾಗುತ್ತದೆ, ಇದು ಕ್ರೈಸ್ತ ಚರ್ಚಿನ ಹೊಸ ಪೋಪ್ ಆಯ್ಕೆಯ ಸಂಕೇತವಾಗಿದೆ.
ಹಿಂದೆ ಕಪ್ಪು ಹೊಗೆಗೆ ಒಣ ಹುಲ್ಲನ್ನು ಮತ್ತು ಬಿಳಿ ಹೊಗೆಗೆ ಹಸಿ ಹುಲ್ಲನ್ನು ಸುಡಲಾಗುತ್ತಿತ್ತು. ಆದರೆ ಈಗ ರಾಸಾಯನಿಕಗಳನ್ನು ಬಳಸಿಕೊಂಡು ಕಪ್ಪು ಮತ್ತು ಬಿಳಿ ಹೊಗೆಯನ್ನು ಉತ್ಪಾದಿಸಲಾಗುತ್ತದೆ.