ರಾಜ್ಯದಲ್ಲಿರಾಜ್ಯದಲ್ಲಿ ಬೆಲೆ ಏರಿಕೆಯ ಭೀಕರತೆಯ ನಡುವೆಯೂ ಸರ್ಕಾರ ಆರ್ಥಿಕ ಸಂಪನ್ಮೂಲ ಸಂಗ್ರಹಣೆಗಾಗಿ ಮತ್ತೊಂದು ಹೆಜ್ಜೆ ಇಡುತ್ತಿದೆ. ಕಡಿಮೆ ದರದ ಮದ್ಯದ ಬೆಲೆಯನ್ನು ಶೀಘ್ರದಲ್ಲಿ ಹೆಚ್ಚಿಸುವ ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದ್ದು, ಇದು ಮದ್ಯಪ್ರಿಯರಿಗೆ ಕಹಿ ಸುದ್ದಿಯಾಗಿ ಪರಿಣಮಿಸಿದೆ. ಒರಿಜನಲ್ ಚಾಯ್ಸ್, ಹೈವಾರ್ಡ್ಸ್, ರಾಜಾ ವಿಸ್ಕಿ, ಒಟಿ ಸೇರಿದಂತೆ ಇತರೆ ಚೀಪ್ ಲಿಕ್ಕರ್ ಬಾಟಲ್‌ಗಳ ದರದಲ್ಲಿ 10 ರಿಂದ 20 ರುಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಸಂಬಂಧ ಅಬಕಾರಿ ಇಲಾಖೆ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ 3988 ವೈನ್‌ಶಾಪ್ ( ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್(ಸಿಎಲ್6ಎ), 2382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8) , 3634 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್) , 1041 ಎಂಎಸ್ ಐಎಲ್ (ಸಿಎಲ್11ಸಿ) ಮತ್ತು 745 ಆರ್ ವಿಬಿ ಸೇರಿ ಒಟ್ಟು 12618 ಮದ್ಯ ದಂಗಡಿಗಳಿವೆ. ನಿತ್ಯ ಮದ್ಯ ಮಾರಟ ದಿಂದಾಗಿ 6570 ಕೋಟಿ ರೂ. ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ.
ಸತತ ಮದ್ಯ ದರ ಏರಿಕೆ:
ಆದಾಯ ಹೆಚ್ಚಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಲ್ಲಿ ಬಿಯರ್ ದರವನ್ನು ನಾಲ್ಕು ಬಾರಿ ಮತ್ತು ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ದರವನ್ನು ಎರಡು ಬಾರಿ ಏರಿಸಲಾಗಿದೆ. ಇದೇ ವೇಳೆ ಪ್ರೀಮಿಯಂ ಮದ್ಯದ ಬೆಲೆಯನ್ನು ಇಳಿಕೆ ಮಾಡಲಾಗಿತ್ತು. 2023ರ ಜುಲೈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10ರಷ್ಟು ಅಬಕಾರಿ ಶುಲ್ಕ ಹೆಚ್ಚಿಸಿದ್ದರು. ಈಗ ಮತ್ತೆ ಚೀಪ್ ಲಿಕ್ಕರ್ ದರ ಏರಿಕೆಗೆ ಸರ್ಕಾರ ಮುಂದಾಗಿದೆ.
ಪ್ರೀಮಿಯಂ ಮದ್ಯದ ಬೆಲೆ ತರ್ಕಬದ್ಧಗೊಳಿಸಲು ಕ್ರಮ:
ನೆರೆಯ ರಾಜ್ಯಗಳಲ್ಲಿ ವಿಧಿಸುವ ಮದ್ಯದ ಬೆಲೆಗೆ ಅನುಗುಣವಾಗಿ ಪ್ರೀಮಿಯಂ ಮದ್ಯದ ದರವನ್ನು ಪರಿಷ್ಕರಿಸುವ ಜೊತೆಗೆ ಅಬಕಾರಿ ಸ್ಲ್ಯಾಬ್‌ಗಳನ್ನು ಸರ್ಕಾರ ತರ್ಕಬದ್ಧಗೊಳಿಸಿದೆ. 2025-26ರ ಬಜೆಟ್‌ನಲ್ಲಿ ಈ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಸರಕಾರ ಘೋಷಿಸಿದೆ.
ನೆರೆಯ ರಾಜ್ಯಗಳಿಂದ 1500 ಕೋಟಿ ರು. ನಷ್ಟ:
ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಗಡಿಭಾಗದಲ್ಲಿ ಮದ್ಯ ಸೇವಿಸುವುದರಿಂದ ಸರಕಾರಕ್ಕೆ ಆರಂಭದಲ್ಲಿ ನೂರಾರು ಕೋಟಿ ರುಪಾಯಿ ಆದಾಯ ಬರುತ್ತಿತ್ತು. ಆದರೆ, ಆಂಧ್ರ ಸರ್ಕಾರ ತನ್ನ ರಾಜ್ಯದಲ್ಲಿ ಮದ್ಯದ ದರವನ್ನು ಇಳಿಸಿದ ನಂತರ ಗಡಿಭಾಗದ ಜನರು ಆಂಧ್ರದಲ್ಲೇ ಮದ್ಯ ಸೇವಿಸುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಸುಮಾರು 1,500 ಕೋಟಿ ರುಪಾಯಿ ಆದಾಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮದ್ಯ ಕೊರತೆಯ ಸಮಸ್ಯೆ:
ರಾಜ್ಯದಲ್ಲಿ ಬಿಯರ್ ಮತ್ತು ಐಎಂಎಲ್ ಲಿಕ್ಕರ್‌ಗಳ ದರ ಸತತವಾಗಿ ಏರಿಕೆಯಾಗುತ್ತಿದ್ದರೂ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದು ಸರ್ಕಾರದ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್‌ಬಿಸಿಎಲ್) 10 ಲಕ್ಷ ರುಪಾಯಿ ಮೌಲ್ಯದ ಮದ್ಯ ಪೂರೈಕೆಗೆ ಇಂಡೆಂಡ್ ಕಳುಹಿಸಿದರೆ, ಕೇವಲ 5 ಲಕ್ಷ ರುಪಾಯಿ ಮೌಲ್ಯದ ಮದ್ಯ ಮಾತ್ರ ಲಭ್ಯವಾಗುತ್ತಿದೆ. ಈ ಕೊರತೆಯಿಂದಾಗಿ 40,000 ಕೋಟಿ ರುಪಾಯಿ ಆದಾಯ ಸಂಗ್ರಹದ ಗುರಿ ತಲುಪುವಲ್ಲಿ ಸರಕಾರಕ್ಕೆ ಸವಾಲಾಗಿದೆ.
ಕೊರತೆ ಮತ್ತು ದರ ಏರಿಕೆಯ ಈ ದ್ವಂದ್ವ ಸಮಸ್ಯೆಯಿಂದ ಮದ್ಯಪ್ರಿಯರಿಗೆ ಹೊರೆಯಾಗುವುದರ ಜೊತೆಗೆ ಸರ್ಕಾರದ ಆರ್ಥಿಕ ಗುರಿಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಆದಾಯ ನಷ್ಟ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.





