ಕನ್ನಡ ಚಿತ್ರರಂಗದ ಪ್ರೀತಿಯ ನಟ, ಅಭಿಮಾನಿಗಳ ಪಾಲಿನ ಅಪ್ಪು ಎಂದೇ ಖ್ಯಾತರಾಗಿದ್ದ ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆ ದಿನ ಇಂದು (ಅಕ್ಟೋಬರ್ 29). 2021ರ ಇದೇ ದಿನ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದ ಪುನೀತ್ ಅವರನ್ನು ಇಡೀ ಕರ್ನಾಟಕ ಇಂದು ಭಾವುಕವಾಗಿ ಸ್ಮರಿಸುತ್ತಿದೆ. ಅವರು ನಮ್ಮನ್ನು ಅಗಲಿ ಐದು ವರ್ಷಗಳು ಕಳೆದಿದ್ದರೂ, ಅವರ ನಗು, ಸರಳ ವ್ಯಕ್ತಿತ್ವ, ಅದ್ಭುತ ನಟನೆಯ ಜೊತೆಗೆ ಸಮಾಜಮುಖಿ ಕಾರ್ಯಗಳು ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ.
ಅಪ್ಪು ಇನ್ನಿಲ್ಲ ಎಂಬ ನೋವನ್ನು ಅವರ ಅಭಿಮಾನಿಗಳು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ. ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪುನೀತ್, ಕೇವಲ ಸಿನಿಮಾಗಳ ಮೂಲಕವಷ್ಟೇ ಅಲ್ಲದೆ, ತಮ್ಮ ಮಾನವೀಯ ಗುಣಗಳ ಮೂಲಕವೂ ಲಕ್ಷಾಂತರ ಜನರ ಪ್ರೀತಿಗೆ ಪಾತ್ರರಾಗಿದ್ದರು.
2021ರ ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದ ಸುದ್ದಿ ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿತ್ತು. ಅಂದು ಬೆಳಿಗ್ಗೆ ಜಿಮ್ನಲ್ಲಿ ವ್ಯಾಯಾಮ ಮುಗಿಸಿದ ಬಳಿಕ ಅವರಿಗೆ ಅಸಹಜವಾಗಿ ಬೆವರು ಕಾಣಿಸಿಕೊಂಡಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕುಟುಂಬ ವೈದ್ಯರಾದ ಡಾ. ರಮಣ್ ರಾವ್ ಅವರನ್ನು ಭೇಟಿಯಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ಕೊನೆಯುಸಿರೆಳೆದರು.
ಈ ಸುದ್ದಿ ಹೊರಬರುತ್ತಿದ್ದಂತೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದರು. ಅಪ್ಪು ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿತು.
ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕಕ್ಕೆ ಅಭಿಮಾನಿಗಳ ಭೇಟಿ
ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕಕ್ಕೆ ಬೆಳಗ್ಗಿನಿಂದಲೇ ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ. ಅಪ್ಪು ಸ್ಮಾರಕವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಆಗಮಿಸಿ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಕುಟುಂಬಸ್ಥರು ಕೂಡ ಸ್ಮಾರಕದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಪ್ಪು ಅವರನ್ನು ಸ್ಮರಿಸಲಿದ್ದಾರೆ.
ಅಪ್ಪು ಹಾದಿಯಲ್ಲಿ ಸಾಗುತ್ತಿರುವ ಅಭಿಮಾನಿಗಳು
ಪುನೀತ್ ರಾಜ್ಕುಮಾರ್ ಅವರ ವ್ಯಕ್ತಿತ್ವದ ವಿಶೇಷತೆ ಎಂದರೆ ಅವರ ಸಮಾಜಮುಖಿ ಕಾರ್ಯಗಳು. ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಮಾಡಿದ ಸಹಾಯ ಅನೇಕರ ಬದುಕಿಗೆ ಆಸರೆಯಾಗಿತ್ತು. ತಮ್ಮ ಸೇವಾ ಕಾರ್ಯಗಳ ಮೂಲಕ ಅವರು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.
ಅವರ ಪುಣ್ಯಸ್ಮರಣೆಯ ಅಂಗವಾಗಿ ರಾಜ್ಯದ ವಿವಿಧೆಡೆ ಅಭಿಮಾನಿ ಸಂಘಟನೆಗಳು ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ, ನೇತ್ರದಾನ ನೋಂದಣಿ, ಅನ್ನಸಂತರ್ಪಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಬಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ವಿತರಣೆ ಹಾಗೂ ಅಗತ್ಯವಿರುವವರಿಗೆ ಧನಸಹಾಯ ಮಾಡುವ ಮೂಲಕ ಅಪ್ಪು ಅವರ ಆದರ್ಶಗಳನ್ನು ಮುಂದುವರಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಮಾನಿಗಳು ಪುನೀತ್ ಅವರ ಚಿತ್ರಗಳು, ಸಿನಿಮಾಗಳ ನೆನಪುಗಳು ಹಾಗೂ ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.





