2026ರ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಉಂಟಾದ ಗೊಂದಲಗಳು ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಪ್ರತಿವರ್ಷವೂ ಕಂಡುಬರುತ್ತಿದ್ದು, ಇದು ಅರಮನೆಯ ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸುದೀರ್ಘ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮುಂದಿನ ವರ್ಷಗಳಲ್ಲಿ ದಸರಾ ಆಚರಣೆಗಳು ಸುಗಮವಾಗಿ ನಡೆಯಲು ಸರ್ಕಾರಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ವಜ್ರಮುಷ್ಟಿ ಕಾಳಗವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ರದ್ದುಗೊಳಿಸಲಾಗಿದೆ ಎಂಬ ಕೆಲವು ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಪ್ರಮೋದಾದೇವಿ ತಿಳಿಸಿದ್ದಾರೆ. 1970 ಮತ್ತು 1980ರ ದಶಕಗಳಲ್ಲಿಯೂ ವಿವಿಧ ಕಾರಣಗಳಿಂದ ಈ ಕಾಳಗ ನಡೆದಿರಲಿಲ್ಲ. 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಲೂ ಕಾಳಗವನ್ನು ನಡೆಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶತಮಾನಗಳಿಂದ ಒಡೆಯರ್ ಕುಟುಂಬವು ಈ ಸಾಂಪ್ರದಾಯಿಕ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಲ್ಲರ ತಲೆಗೆ ಗಾಯವಾದರೆ ಅದು ಪಂದ್ಯದ ಅಂತ್ಯವನ್ನು ಸೂಚಿಸುತ್ತದೆಯೇ ಹೊರತು, ವಿಜಯದಶಮಿ ಆಚರಣೆಯ ಧಾರ್ಮಿಕ ಸಂಕೇತವಲ್ಲ ಎಂದು ವಿವರಿಸಿದ್ದಾರೆ.
ಜಟ್ಟಿ ಸಮುದಾಯದ ಎರಡು ಗುಂಪುಗಳ ನಡುವೆ ಸಮನ್ವಯದ ಕೊರತೆ ಹಾಗೂ ಅರಮನೆಯ ದ್ವಾರದಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರಿಂದ ಗೊಂದಲ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಚಿನ್ನದ ಅಂಬಾರಿ ಬಳಿ ಭದ್ರತಾ ನಿಯಮ ಉಲ್ಲಂಘಿಸಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸೆಲ್ಫಿ ತೆಗೆದುಕೊಳ್ಳುವುದು ಕರ್ತವ್ಯ ಲೋಪಕ್ಕೆ ಕಾರಣವಾಗುತ್ತದೆ ಎಂದು ಆಕ್ಷೇಪಿಸಿದ್ದಾರೆ.
ಅಂಬಾರಿಯನ್ನು ಸುರಕ್ಷಿತವಾಗಿ ಹಿಂದಿರುಗಿಸುವ ವಿಚಾರದಲ್ಲಿ ಅಧಿಕೃತ ಪಾಸ್ ಹೊಂದಿದ್ದ ಅರಮನೆಯ ಪ್ರತಿನಿಧಿಗಳೊಂದಿಗೆ ಪೊಲೀಸ್ ಸಿಬ್ಬಂದಿ ಮತ್ತು ಡಿಸಿಪಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಅಂಬಾರಿ ಖಾಸಗಿ ಆಸ್ತಿಯಾಗಿದ್ದು, ಅದರ ರಕ್ಷಣೆಗೆ ನೀಡಿದ ಭರವಸೆಯನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಅರಮನೆಯ ಖಾಸಗಿ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ವಾಹನಗಳನ್ನು ನಿಲ್ಲಿಸಿರುವುದು ಹಾಗೂ ತಡೆಬೇಲಿಗಳಿಂದ ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಯಾಗುತ್ತಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಹೊರುವ ಆನೆಯ ವಿವರವನ್ನು ಕೊನೆಯ ಕ್ಷಣದವರೆಗೆ ಅರಮನೆಗೆ ತಿಳಿಸಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಹೊರುವ ಆನೆಯ ವಿವರವನ್ನು ಕೊನೆಯ ಕ್ಷಣದವರೆಗೆ ಅರಮನೆಗೆ ತಿಳಿಸಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ದಸರಾಕ್ಕೆ ಧಾರ್ಮಿಕ ಮಹತ್ವವಿಲ್ಲ, ಆದರೆ ಅರಮನೆಯ ನವರಾತ್ರಿ ಆಚರಣೆಗಳು ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿವೆ ಎಂದು ಪ್ರತಿಪಾದಿಸಿರುವ ಪ್ರಮೋದಾದೇವಿ, ಸರ್ಕಾರವು ತಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾಡದೇವತೆಗೆ ತಕ್ಕ ಗೌರವದೊಂದಿಗೆ ದಸರಾ ಆಚರಣೆಗಳು ನಡೆಯಬೇಕೆಂಬುದು ಅವರ ಆಶಯವಾಗಿದೆ.





