ಲಕ್ನೋ: ಪ್ರಿಯಕರ ಶಿವ ಶರ್ಮಾ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಇನ್ಫ್ಲುಯೆನ್ಸರ್ ಶ್ರದ್ಧಾ ದುಬೆಯನ್ನು ನಾಗಪುರದಲ್ಲಿ ಬಂಧಿಸಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಲು ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದ ಶ್ರದ್ಧಾ ಬಗ್ಗೆ ಮಾಹಿತಿ ನೀಡುವವರಿಗೆ ರೂ. 50,000 ಬಹುಮಾನ ಘೋಷಿಸಲಾಗಿತ್ತು.
ಶಿವ ಶರ್ಮಾ ಅವರು ಲಕ್ನೋದಲ್ಲಿರುವ ಶ್ರದ್ಧಾ ದುಬೆ ಅವರ ಫ್ಲಾಟ್ನಿಂದ ಬಿದ್ದು ಮೃತಪಟ್ಟಿದ್ದರು. ಆದರೆ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದ ಅವರ ಕುಟುಂಬಸ್ಥರು ಶ್ರದ್ಧಾ ದುಬೆ ವಿರುದ್ಧ ದೂರು ನೀಡಿದ್ದರು. ಪ್ರಕರಣದ ತನಿಖೆ ಮುಂದುವರಿದಂತೆ ಶ್ರದ್ಧಾ ಸೇರಿದಂತೆ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಶ್ರದ್ಧಾ ದುಬೆ, ಆಕೆಯ ಸಹೋದರಿ ರಶ್ಮಿ ದುಬೆ ಹಾಗೂ ಚಾಲಕ ಡ್ಯಾನಿಶ್, ಶರ್ಮಾ ಸಾವಿನ ಬಳಿಕ ಲಕ್ನೋದಿಂದ ನೇಪಾಳಕ್ಕೆ ಪರಾರಿಯಾಗಿದ್ದರು ಎನ್ನಲಾಗಿದೆ. ಬಳಿಕ ನೇಪಾಳದಿಂದ ರಾಯ್ ಬರೇಲಿ ಮಾರ್ಗವಾಗಿ ಆಗ್ರಾಕ್ಕೆ ತೆರಳಿ ಅಲ್ಲಿಂದ ನಾಗಪುರ ತಲುಪಿದ್ದರು. ಬಂಧನಕ್ಕೂ ಮುನ್ನ ನಾಗಪುರದಿಂದ ಮತ್ತೆ ಪರಾರಿಯಾಗಲು ಆರೋಪಿಗಳು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಕಲೆಹಾಕಿದ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (STF) ಮತ್ತು ನಾಗಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರದ್ಧಾ ಹೇಳಿದ್ದೇನು?
ಶಿವ ಶರ್ಮಾ ಸಾವಿನ ಬಳಿಕ ತಲೆಮರೆಸಿಕೊಂಡಿದ್ದ ಶ್ರದ್ಧಾ ದುಬೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳನ್ನು ಹಂಚಿಕೊಂಡು ತಾನು ನಿರ್ದೋಷಿ ಎಂದು ಹೇಳಿಕೊಂಡಿದ್ದಳು. ಶರ್ಮಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆಕೆ ವಾದಿಸಿದ್ದಳು.
ಶಿವ ಶರ್ಮಾ ಪರಿಚಯವಾಗಿ ಕೇವಲ ನಾಲ್ಕು ತಿಂಗಳಾಗಿತ್ತು. ಆರಂಭದಲ್ಲಿ ಸುಮಾರು ಎರಡೂವರೆ ತಿಂಗಳು ಸ್ನೇಹಿತರಾಗಿದ್ದೆವು ಹಾಗೂ ಕಳೆದ ಎರಡು ತಿಂಗಳಿನಿಂದ ಅವರು ತನ್ನ ಫ್ಲಾಟ್ಗೆ ಬರುತ್ತಿದ್ದರು ಎಂದು ಶ್ರದ್ಧಾ ಹೇಳಿಕೊಂಡಿದ್ದಳು. ಇಷ್ಟು ಕಡಿಮೆ ಅವಧಿಯಲ್ಲಿ ದ್ವೇಷ ಬೆಳೆಯಲು ಸಾಧ್ಯವಿಲ್ಲ ಎಂದೂ ಆಕೆ ಹೇಳಿದ್ದಳು.
ಶರ್ಮಾ ಅವರ ತಾಯಿಗೆ ಆರಂಭದಿಂದಲೂ ತನ್ನ ಮೇಲೆ ಇಷ್ಟವಿರಲಿಲ್ಲ. ಹೀಗಾಗಿ ಅವರು ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಶ್ರದ್ಧಾ ವಿಡಿಯೋದಲ್ಲಿ ಹೇಳಿಕೊಂಡಿದ್ದಳು. ಅಲ್ಲದೆ, ಶಿವ ಶರ್ಮಾ ಸುಮಾರು ರೂ. 20 ಲಕ್ಷ ಸಾಲದಲ್ಲಿದ್ದರು ಮತ್ತು ಸಾಲ ತೀರಿಸಲು ಸಾಧ್ಯವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು ಎಂದು ಆಕೆ ಆರೋಪಿಸಿದ್ದಳು.
ಶಿವ ಶರ್ಮಾ ಲಕ್ನೋದಲ್ಲಿ ಹಲವು ರೆಸ್ಟೋರೆಂಟ್ಗಳನ್ನು ಹೊಂದಿದ್ದರು. ಅವರ ಸಾವಿನ ಬಳಿಕ ತಾಯಿ ಆರೋಪಿಗಳ ವಿರುದ್ಧ ಬ್ಲ್ಯಾಕ್ಮೇಲ್ ಹಾಗೂ ಕೊಲೆ ಆರೋಪಗಳನ್ನು ಮಾಡಿದ್ದರು. ಇದೀಗ ಶ್ರದ್ಧಾ ಬಂಧನವಾಗಿರುವುದರಿಂದ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.





