ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯರಗನಹಳ್ಳಿಯಲ್ಲಿ ಆಯುಧ ಪೂಜೆ ಹಿನ್ನೆಲೆಯಲ್ಲಿ ವಾಹನ ಪೂಜೆ ಮಾಡುತ್ತಿದ್ದ ವೇಳೆ ದಾರುಣ ಘಟನೆ ನಡೆದಿದೆ. ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಕಂದನ್ ಎಸ್. ಗೌಡ ಎಂದು ಗುರುತಿಸಲಾಗಿದೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಸಂಪತ್ ಕುಟುಂಬಸ್ಥರು ವಾಹನ ಪೂಜೆ ನೆರವೇರಿಸುತ್ತಿದ್ದರು. ಪೂಜೆ ಮುಗಿದ ಬಳಿಕ ಸಂಪತ್ ಅವರ ಬಾಮೈದ ಸಂಜಯ್ ಕಾರನ್ನು ಬೇರೆಡೆ ನಿಲ್ಲಿಸಲು ಮುಂದಾಗಿದ್ದರು.
ಈ ವೇಳೆ ಸಂಪತ್ ಅವರ ಪುತ್ರ ಕಂದನ್ ಕಾರು ಹತ್ತಲು ಮುಂದಾಗಿದ್ದಾನೆ ಎನ್ನಲಾಗಿದೆ. ಬಾಲಕ ಕಾರಿನ ಸಮೀಪದಲ್ಲಿರುವುದನ್ನು ಗಮನಿಸದೇ ಸಂಜಯ್ ವಾಹನ ಚಲಾಯಿಸಿದ್ದಾರೆ. ಪರಿಣಾಮ ಬಾಲಕ ಕಾರಿನ ಚಕ್ರಕ್ಕೆ ಸಿಲುಕಿದ್ದಾನೆ.
ಅಪಘಾತದಲ್ಲಿ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಬಾಲಕನನ್ನು ಮದ್ದೂರು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಬಾಲಕ ಮೃತಪಟ್ಟಿದ್ದಾನೆ.
ಆಯುಧ ಪೂಜೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ಏಕಾಏಕಿ ಸಂಭವಿಸಿದ ಈ ಘಟನೆ ಆಘಾತವನ್ನುಂಟು ಮಾಡಿದೆ. ಮನೆಯಲ್ಲಿ ಹಬ್ಬದ ವಾತಾವರಣವಿದ್ದ ಸಂದರ್ಭದಲ್ಲಿ ನಡೆದ ದುರಂತದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.




