ನವದೆಹಲಿ, ಸೆಪ್ಟೆಂಬರ್ 10: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬಹುನಿರೀಕ್ಷಿತ ಬ್ರಿಕ್ಸ್ ಶೃಂಗಸಭೆಯ ಎಫೆಕ್ಟ್ ಇದೀಗ ಹೋಟೆಲ್‌ಗಳ ಮೇಲೂ ಬಿದ್ದಿದೆ. ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು, ಸಚಿವರು, ರಾಜತಾಂತ್ರಿಕರು ಹಾಗೂ ಹಿರಿಯ ಅಧಿಕಾರಿಗಳು ದೆಹಲಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಐಷಾರಾಮಿ ಹೋಟೆಲ್‌ಗಳ ಕೊಠಡಿಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ಸೆಂಟ್ರಲ್ ದೆಹಲಿ, ಲ್ಯೂಟಿಯನ್ಸ್ ದೆಹಲಿ ಮತ್ತು ಏರೋಸಿಟಿ ಪ್ರದೇಶಗಳ ಪ್ರಮುಖ ಪಂಚತಾರಾ ಹೋಟೆಲ್‌ಗಳಲ್ಲಿ ಬಹುತೇಕ ಕೊಠಡಿಗಳು ಈಗಾಗಲೇ ಬುಕ್ ಆಗಿವೆ. ತಾಜ್ ಮಹಲ್ ಹೋಟೆಲ್, ಐಟಿಸಿ ಮೌರ್ಯ, ದಿ ಲಲಿತ್ ಸೇರಿದಂತೆ ಹಲವು ಪ್ರಸಿದ್ಧ ಹೋಟೆಲ್‌ಗಳಲ್ಲಿ ವಿದೇಶಿ ನಿಯೋಗಗಳ ವಾಸ್ತವ್ಯಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಸಾಮಾನ್ಯ ದಿನಗಳಲ್ಲಿ ಸುಮಾರು ರೂ. 18,000ಕ್ಕೆ ಲಭ್ಯವಾಗುತ್ತಿದ್ದ ಕೆಲವು ಐಷಾರಾಮಿ ಕೊಠಡಿಗಳ ದರ ಇದೀಗ ಭಾರೀ ಏರಿಕೆ ಕಂಡಿದೆ. ಈ ಹಿಂದೆ ಸುಮಾರು ರೂ. 80,000ರಷ್ಟಿದ್ದ ಕೊಠಡಿ ದರಗಳು ಈಗ ರೂ.1 ಲಕ್ಷದಿಂದ ರೂ. 2.4 ಲಕ್ಷದವರೆಗೆ ತಲುಪಿವೆ ಎನ್ನಲಾಗಿದೆ. ಈ ದರ ಏರಿಕೆಯ ಪರಿಣಾಮ ಸೆಪ್ಟೆಂಬರ್ 20ರವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಆನ್‌ಲೈನ್ ಹೋಟೆಲ್ ಹುಡುಕಾಟ ಶೇ.50ರಷ್ಟು ಹೆಚ್ಚಳ
ಪ್ರಮುಖ ಪ್ರವಾಸೋದ್ಯಮ ವೇದಿಕೆ ಇಕ್ಸಿಗೋದ ಸಿಇಒ ಅಲೋಕ್ ಬಾಜಪೇಯಿ ಅವರ ಪ್ರಕಾರ, ದೆಹಲಿಯ ಪಂಚತಾರಾ ಹೋಟೆಲ್‌ಗಳಿಗಾಗಿ ಆನ್‌ಲೈನ್ ಹುಡುಕಾಟದಲ್ಲಿ ಸುಮಾರು ಶೇ.50ರಷ್ಟು ಏರಿಕೆ ಕಂಡುಬಂದಿದೆ. ಲೀಲಾ ಪ್ಯಾಲೇಸ್, ತಾಜ್ ಗ್ರೂಪ್, ರೇಡಿಸನ್ ಮತ್ತು ಐಟಿಸಿ ಗ್ರೂಪ್‌ಗೆ ಸೇರಿದ ಹಲವು ಹೋಟೆಲ್‌ಗಳು ಸೆಪ್ಟೆಂಬರ್ 12 ಮತ್ತು 13ರಂದು ಬಹುತೇಕ ಸಂಪೂರ್ಣ ಬುಕ್ ಆಗಿವೆ ಎನ್ನಲಾಗಿದೆ.
ಕೊಠಡಿಗಳ ಕೊರತೆ ಕೇವಲ ಕೇಂದ್ರ ದೆಹಲಿಗೆ ಸೀಮಿತವಾಗಿಲ್ಲ. ಗುರುಗ್ರಾಮ, ನೊಯ್ಡಾ ಮತ್ತು ಏರೋಸಿಟಿಯ ಹೋಟೆಲ್‌ಗಳಿಗೂ ಬೇಡಿಕೆ ಹೆಚ್ಚಿದ್ದು, ಎನ್‌ಸಿಆರ್‌ನ ಹಲವು ಪ್ರಮುಖ ಹೋಟೆಲ್‌ಗಳಲ್ಲಿ ಕೊಠಡಿಗಳು ಭರ್ತಿಯಾಗಿವೆ.
ಐಟಿಸಿ ಮೌರ್ಯದಲ್ಲಿ ರೂ. 2.4 ಲಕ್ಷದ ಸಮೀಪ ದರ
BRICS ಶೃಂಗಸಭೆಯ ದಿನಗಳಲ್ಲಿ ಐಟಿಸಿ ಮೌರ್ಯ ಹೋಟೆಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಒಂದು ರಾತ್ರಿಯ ತಂಗುವಿಕೆಗೆ ಸುಮಾರು ರೂ. 2.33 ಲಕ್ಷ ದರ ನಿಗದಿಯಾಗಿರುವುದು ಗಮನ ಸೆಳೆದಿದೆ. ಥರ್ಡ್-ಪಾರ್ಟಿ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದೇ ಕೊಠಡಿಯ ದರ ಸುಮಾರು ರೂ. 2.5 ಲಕ್ಷದವರೆಗೆ ತಲುಪಿದೆ ಎನ್ನಲಾಗಿದೆ.
ವಿದೇಶಿ ಗಣ್ಯರು ಹಾಗೂ ನಿಯೋಗಗಳ ಆಗಮನದಿಂದ ದೆಹಲಿಯ ಆತಿಥ್ಯ ಉದ್ಯಮಕ್ಕೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದ್ದು, BRICS ಶೃಂಗಸಭೆಯು ಹೋಟೆಲ್ ಉದ್ಯಮಕ್ಕೆ ದೊಡ್ಡ ಮಟ್ಟದ ವ್ಯಾಪಾರ ಚಟುವಟಿಕೆಗೆ ಕಾರಣವಾಗಿದೆ.





