ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಸೇರಿದಂತೆ ಬೆಂಗಳೂರು, ಬೆಳಗಾವಿ ಹಾಗೂ ಗೋಕಾಕ್‌ನ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ್ದ ಶೋಧ ಕಾರ್ಯಾಚರಣೆ ಅಂತ್ಯಗೊಂಡಿದೆ. ಸತತ ಸುಮಾರು 36 ಗಂಟೆಗಳ ಕಾಲ ನಡೆದ ವಿಚಾರಣೆ ಮತ್ತು ಶೋಧದ ಬಳಿಕ ED ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ.
ಮೂಲಗಳ ಪ್ರಕಾರ, ಒಟ್ಟು 18 ಸ್ಥಳಗಳಲ್ಲಿ ಶೋಧ ನಡೆಸಿರುವ ED ಅಧಿಕಾರಿಗಳು ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ 3 ಕೋಟಿಗೂ ಅಧಿಕ ನಗದು ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಮನೆಯಲ್ಲಿ ಸುಮಾರು 1.20 ಕೋಟಿ ಹಣವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಗೋಕಾಕ್‌ನ ನಿವಾಸದಲ್ಲಿ ಪತ್ತೆಯಾದ ಹಣವನ್ನು ಸಾಗಿಸಲು ಅಧಿಕಾರಿಗಳು ಬೊಲೆರೋ ವಾಹನದಲ್ಲಿ ಎರಡು ಟ್ರಂಕ್‌ಗಳನ್ನು ತಂದಿದ್ದರು ಎಂದು ತಿಳಿದುಬಂದಿದೆ.
ಶೋಧದ ವೇಳೆ ಸಚಿವರ ಚಾರ್ಟರ್ಡ್ ಅಕೌಂಟೆಂಟ್‌ಗಳಾದ ಪ್ರದೀಪ್ ಕುಮಾರ್ ಇಂಡಿ ಹಾಗೂ ಸೈದಪ್ಪ ಗದಾಡಿ ಅವರನ್ನು ಕರೆಸಿ ED ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಆಫ್ರಿಕಾದ ರುವಾಂಡಾದಲ್ಲಿ ನಡೆದಿರುವ ಗಣಿಗಾರಿಕೆ ಸಂಬಂಧಿತ ಹೂಡಿಕೆಗಳ ದಾಖಲೆಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸ ಹಾಗೂ ಬಾಮೈದನ ನಿವಾಸದಲ್ಲೂ ಶೋಧ ಕಾರ್ಯಾಚರಣೆ ನಡೆದಿದ್ದು, ಕೆಲವು ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬುಧವಾರ ತಡರಾತ್ರಿ ಸುಮಾರು 2 ಗಂಟೆಯವರೆಗೆ ವಿಚಾರಣೆ ನಡೆದಿದ್ದು, ಗುರುವಾರ ಬೆಳಗ್ಗೆ 6 ಗಂಟೆಯಿಂದ ಮತ್ತೆ ವಿಚಾರಣೆ ಮತ್ತು ಶೋಧ ಮುಂದುವರಿದಿತ್ತು ಎಂದು ತಿಳಿದುಬಂದಿದೆ.
ಈ ನಡುವೆ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಲು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರೂ ಬೆಂಗಳೂರು ನಿವಾಸಕ್ಕೆ ಆಗಮಿಸಿದ್ದರು. ಆದರೆ ED ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ.
ED ದಾಳಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಧಾರವಾಡ, ಚಾಮರಾಜನಗರ, ಗದಗ, ಹಾವೇರಿ ಹಾಗೂ ಚಿತ್ರದುರ್ಗ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಮತ್ತು ದಲಿತ ಸಮುದಾಯದವರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ED ಶೋಧ ಅಂತ್ಯಗೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಸತೀಶ್ ಜಾರಕಿಹೊಳಿ ಅವರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಶೋಧದ ವೇಳೆ ವಶಪಡಿಸಿಕೊಂಡ ದಾಖಲೆಗಳು ಮತ್ತು ಹಣಕ್ಕೆ ಸಂಬಂಧಿಸಿದಂತೆ ED ಮುಂದಿನ ಹಂತದಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.





