ನವದೆಹಲಿ ಸೆ. 09 : ದೇಶದ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಸಭೆಯಲ್ಲಿ ₹10,783 ಕೋಟಿ ವೆಚ್ಚದ ಮೂರು ಪ್ರಮುಖ ರೈಲ್ವೆ ವಿಸ್ತರಣಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಈ ಯೋಜನೆಗಳಡಿ ಒಟ್ಟು ಸುಮಾರು 656 ಕಿ.ಮೀ. ಹೊಸ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಐದು ರಾಜ್ಯಗಳಿಗೆ ನೇರ ಪ್ರಯೋಜನವಾಗಲಿದೆ. 2029-30ನೇ ಹಣಕಾಸು ವರ್ಷದೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
14 ಜಿಲ್ಲೆಗಳ 4,790 ಹಳ್ಳಿಗಳಿಗೆ ಪ್ರಯೋಜನ
ರೈಲು ಮಾರ್ಗಗಳ ವಿಸ್ತರಣೆಯಿಂದ ಐದು ರಾಜ್ಯಗಳ 14 ಜಿಲ್ಲೆಗಳ ಸುಮಾರು 4,790 ಹಳ್ಳಿಗಳ 56 ಲಕ್ಷ ಜನರಿಗೆ ನೇರವಾಗಿ ಅನುಕೂಲವಾಗಲಿದೆ. ಕೈಗಾರಿಕೆ, ಕೃಷಿ, ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಸಂಪರ್ಕವೂ ಇದರಿಂದ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.
ಅನುಮೋದನೆ ಪಡೆದ ಯೋಜನೆಗಳಲ್ಲಿ ಖರಗ್‌ಪುರ–ಝಾರ್ಸುಗುಡ (ಬಾಗ್‌ದೇಹಿ) ನಾಲ್ಕನೇ ರೈಲು ಮಾರ್ಗ, ಕಟ್ನಿ–ಪೇಂದ್ರಾ ರಸ್ತೆ ನಾಲ್ಕನೇ ರೈಲು ಮಾರ್ಗ ಹಾಗೂ ಬಿಲಾಸ್‌ಪುರ (ಉಸ್ಲಾಪುರ)–ಪೇಂದ್ರಾ ರಸ್ತೆ ಮೂರನೇ ರೈಲು ಮಾರ್ಗ ಸೇರಿವೆ.
ಸರಕು ಸಾಗಣೆಗೆ ವೇಗ
ಈ ರೈಲು ಮಾರ್ಗಗಳು ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ ಮತ್ತು ಉಕ್ಕಿನಂತಹ ಪ್ರಮುಖ ಸರಕುಗಳ ಸಾಗಣೆಗೆ ನಿರ್ಣಾಯಕವಾಗಿವೆ. ಹೊಸ ಮಾರ್ಗಗಳಿಂದ ವಾರ್ಷಿಕ ಸುಮಾರು 27 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಮರ್ಥ್ಯ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ಕೈಗಾರಿಕೆಗಳಿಗೆ ಸಾಗಣೆ ವ್ಯವಸ್ಥೆ ಸುಗಮವಾಗುವುದರ ಜೊತೆಗೆ ಲಾಜಿಸ್ಟಿಕ್ಸ್ ವೆಚ್ಚವೂ ಕಡಿಮೆಯಾಗುವ ಸಾಧ್ಯತೆ ಇದೆ.
ಪರಿಸರಕ್ಕೂ ಲಾಭ
ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ರೂಪಿಸಲಾಗಿರುವ ಈ ಯೋಜನೆಗಳು ಬಹುಮಾದರಿ ಸಾರಿಗೆ ಸಂಪರ್ಕವನ್ನು ಬಲಪಡಿಸುವ ಗುರಿ ಹೊಂದಿವೆ. ರೈಲ್ವೆ ಮೂಲಕ ಸರಕು ಸಾಗಣೆ ಹೆಚ್ಚುವುದರಿಂದ ರಸ್ತೆ ಸಾರಿಗೆ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಯೋಜನೆಗಳಿಂದ ಸುಮಾರು 12 ಕೋಟಿ ಲೀಟರ್ ಇಂಧನ ಆಮದು ಉಳಿತಾಯವಾಗುವ ನಿರೀಕ್ಷೆಯಿದ್ದು, ಸುಮಾರು 62 ಕೋಟಿ ಕೆ.ಜಿ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆಯಾಗಲಿದೆ. ಇದು ಸುಮಾರು 2.48 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾದ ಪರಿಸರ ಪ್ರಯೋಜನ ಎಂದು ಅಂದಾಜಿಸಲಾಗಿದೆ.
ಇದರ ಜೊತೆಗೆ ಬಾಂದವ್‌ಗಢ ಟೈಗರ್ ರಿಸರ್ವ್, ಅಮರಕಂಟಕ, ತಾರಾತಾರಿಣಿ ದೇವಸ್ಥಾನ ಹಾಗೂ ಜಾರ್ಖಂಡ್‌ನ ಶ್ರೀ ಕ್ಷೇತ್ರ ಜಗನ್ನಾಥ ದೇವಸ್ಥಾನ ಸೇರಿದಂತೆ ಪ್ರಮುಖ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ.





