ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳಲ್ಲಿ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಸೆಪ್ಟೆಂಬರ್ 4ರಿಂದ ನಗರದ ನಾಲ್ಕು ಪ್ರಮುಖ ಫ್ಲೈಓವರ್‌ಗಳು ಮತ್ತು ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ನಿರ್ದಿಷ್ಟ ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನಗಳ ವೇಗದಲ್ಲಿನ ವ್ಯತ್ಯಾಸ, ಅಪಘಾತಗಳ ಪ್ರಮಾಣ, ವಾಹನಗಳು ಕೆಟ್ಟು ನಿಲ್ಲುವುದರಿಂದ ಉಂಟಾಗುವ ಟ್ರಾಫಿಕ್ ಜಾಮ್ ಹಾಗೂ ಫ್ಲೈಓವರ್‌ಗಳ ಪ್ರವೇಶ ಮತ್ತು ನಿರ್ಗಮನ ಪ್ರದೇಶಗಳಲ್ಲಿನ ದಟ್ಟಣೆಯನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಂಚಾರ ಪೊಲೀಸರ ಪ್ರಕಾರ, ಹೊಸ ನಿಯಮಗಳ ಮುಖ್ಯ ಉದ್ದೇಶ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು, ಅಪಘಾತಗಳ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ವಾಹನ ಸಂಚಾರವನ್ನು ಸುಗಮಗೊಳಿಸುವುದಾಗಿದೆ. ಪ್ರಮುಖವಾಗಿ ದ್ವಿಚಕ್ರ ವಾಹನಗಳು, ಪ್ರಯಾಣಿಕರ ಆಟೋರಿಕ್ಷಾಗಳು ಹಾಗೂ ವಿವಿಧ ರೀತಿಯ ಸರಕು ಸಾಗಣೆ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ.
ಏರ್‌ಪೋರ್ಟ್ ರಸ್ತೆ ಫ್ಲೈಓವರ್
ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ್ ಜಂಕ್ಷನ್‌ವರೆಗಿನ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ರಸ್ತೆ ಎಲಿವೇಟೆಡ್ ಕಾರಿಡಾರ್‌ನಲ್ಲಿ ದ್ವಿಚಕ್ರ ವಾಹನಗಳು ಮತ್ತು ಪ್ರಯಾಣಿಕರ ಆಟೋರಿಕ್ಷಾಗಳಿಗೆ ದಿನದ 24 ಗಂಟೆಯೂ ಪ್ರವೇಶ ಇರುವುದಿಲ್ಲ. ಜೊತೆಗೆ ಎಲ್ಲಾ ವರ್ಗದ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ಬಂಧ ಅನ್ವಯಿಸುತ್ತದೆ.
ಪೀಣ್ಯ ಎಲಿವೇಟೆಡ್ ಕಾರಿಡಾರ್
ಪೀಣ್ಯ ಫ್ಲೈಓವರ್‌ನಲ್ಲಿ ಪ್ರಯಾಣಿಕರ ಆಟೋರಿಕ್ಷಾ ಹಾಗೂ ಮೂರು ಚಕ್ರದ ಸರಕು ಆಟೋಗಳಿಗೆ 24 ಗಂಟೆಯೂ ಸಂಚಾರ ನಿರ್ಬಂಧಿಸಲಾಗಿದೆ. ಭಾರೀ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ನಿರ್ಬಂಧ ಇರಲಿದೆ.
ಬಿಜಿಎಸ್ ಫ್ಲೈಓವರ್
ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್‌ನಲ್ಲಿ ಭಾರೀ ಸರಕು ಸಾಗಣೆ ವಾಹನಗಳಿಗೆ ದಿನದ 24 ಗಂಟೆಯೂ ನಿಷೇಧವಿದೆ. ಇತರ ಸರಕು ವಾಹನಗಳು ಹಾಗೂ ಮೂರು ಚಕ್ರದ ಸರಕು ಆಟೋಗಳು ಬೆಳಗ್ಗೆ 7ರಿಂದ 11ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 10ರವರೆಗೆ ಸಂಚರಿಸುವಂತಿಲ್ಲ.
ಸಿಲ್ಕ್ ಬೋರ್ಡ್–ರಾಗಿಗುಡ್ಡ ಡಬಲ್ ಡೆಕ್ಕರ್
ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ ಇರುವ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಭಾರೀ ಸರಕು ಸಾಗಣೆ ವಾಹನಗಳಿಗೆ 24 ಗಂಟೆಯೂ ನಿರ್ಬಂಧ ಜಾರಿಯಲ್ಲಿದೆ. ಇಂತಹ ವಾಹನಗಳಿಂದ ಉಂಟಾಗಬಹುದಾದ ನಿಧಾನಗತಿಯ ಸಂಚಾರ ಮತ್ತು ವಾಹನ ಕೆಟ್ಟು ನಿಲ್ಲುವ ಸಂದರ್ಭಗಳನ್ನು ಕಡಿಮೆ ಮಾಡುವ ಉದ್ದೇಶ ಇದಾಗಿದೆ.
ಇನ್ನು ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲಿ ಇದೇ ರೀತಿಯ ನಿರ್ಬಂಧಗಳು ಸೆಪ್ಟೆಂಬರ್ 11ರಿಂದ ಜಾರಿಗೆ ಬರಲಿವೆ. ಇಲ್ಲಿ ದ್ವಿಚಕ್ರ ವಾಹನಗಳು, ಪ್ರಯಾಣಿಕರ ಆಟೋಗಳು ಮತ್ತು ಮೂರು ಚಕ್ರದ ಸರಕು ಆಟೋಗಳಿಗೆ ದಿನದ 24 ಗಂಟೆಯೂ ನಿರ್ಬಂಧವಿರಲಿದ್ದು, ಭಾರೀ, ಮಧ್ಯಮ ಮತ್ತು ಹಗುರ ಸರಕು ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ಬಂಧ ವಿಧಿಸಲಾಗುತ್ತದೆ.
ಹೊಸ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿ ಫ್ಲೈಓವರ್ ಬಳಸುವ ವಾಹನ ಸವಾರರು ತಮ್ಮ ವಾಹನಕ್ಕೆ ಅನ್ವಯಿಸುವ ನಿಯಮ ಮತ್ತು ನಿರ್ಬಂಧದ ಸಮಯವನ್ನು ಗಮನಿಸಿ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.





