ದುಲೀಪ್ ಟ್ರೋಫಿ 2026ರ ಸೆಮಿಫೈನಲ್ ಪಂದ್ಯದಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್‌ನಲ್ಲಿ ವೈಭವ್ ಎರಡು ಇನಿಂಗ್ಸ್‌ಗಳಿಂದ ಒಟ್ಟು 132 ರನ್ ಕಲೆಹಾಕಿ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲೇ ದುಲೀಪ್ ಟ್ರೋಫಿಯಂತಹ ಮಹತ್ವದ ಪಂದ್ಯದಲ್ಲಿ 100ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆ ಇದೀಗ ಅವರ ಪಾಲಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೆಂಟ್ರಲ್ ಝೋನ್ ತಂಡ 266 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಈಸ್ಟ್ ಝೋನ್ ತಂಡದ ಪರ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಯುವ ದಾಂಡಿಗ 92 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಈಸ್ಟ್ ಝೋನ್ ತಂಡವೂ 266 ರನ್‌ಗಳನ್ನು ಕಲೆಹಾಕಿ ಮೊದಲ ಇನಿಂಗ್ಸ್‌ನಲ್ಲಿ ಸಮಬಲ ಸಾಧಿಸಿತು.
ಇದಾದ ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ಸೆಂಟ್ರಲ್ ಝೋನ್ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಈಸ್ಟ್ ಝೋನ್ ಬೌಲರ್‌ಗಳು ಯಶಸ್ವಿಯಾದರು. ಮುಕೇಶ್ ಕುಮಾರ್ ನಾಲ್ಕು ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಸೆಂಟ್ರಲ್ ಝೋನ್ ತಂಡ ಕೇವಲ 158 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಈಸ್ಟ್ ಝೋನ್ ತಂಡಕ್ಕೆ ಗೆಲುವಿಗಾಗಿ 159 ರನ್‌ಗಳ ಗುರಿ ಲಭಿಸಿತು.
159 ರನ್‌ಗಳ ಗುರಿ ಬೆನ್ನತ್ತಿದ ಈಸ್ಟ್ ಝೋನ್ ತಂಡಕ್ಕೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಉತ್ತಮ ಆರಂಭ ಒದಗಿಸಿದರು. ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮೊರೆ ಹೋದ ವೈಭವ್, ಬಳಿಕ ತಮ್ಮದೇ ಶೈಲಿಯ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮರಳಿದರು. ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ರನ್‌ವೇಗ ಹೆಚ್ಚಿಸಿದ ಅವರು ಕೇವಲ 43 ಎಸೆತಗಳಲ್ಲಿ 40 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಸೇರಿದ್ದವು.
ಆದರೆ ದೊಡ್ಡ ಹೊಡೆತಕ್ಕೆ ಮುಂದಾದ ವೈಭವ್ 40 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕದ ಗಡಿ ದಾಟಲು ಸಾಧ್ಯವಾಗದಿದ್ದರೂ, ಮೊದಲ ಇನಿಂಗ್ಸ್‌ನ 92 ರನ್‌ಗಳೊಂದಿಗೆ ಸೇರಿ ಪಂದ್ಯದಲ್ಲಿ ಒಟ್ಟು 132 ರನ್‌ಗಳನ್ನು ಕಲೆಹಾಕಿದರು.
ಈ 132 ರನ್‌ಗಳೇ ಇದೀಗ ವೈಭವ್ ಸೂರ್ಯವಂಶಿ ಅವರ ಹೆಸರಿನಲ್ಲಿ ಹೊಸ ದಾಖಲೆ ಬರೆಯಲು ಕಾರಣವಾಗಿವೆ. ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಎರಡು ಇನಿಂಗ್ಸ್‌ಗಳಿಂದ ಒಟ್ಟು 100ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶೇಷ ಸಾಧನೆಯನ್ನು ವೈಭವ್ ಮಾಡಿದ್ದಾರೆ.
ಇದಕ್ಕೂ ಮೊದಲು ಈ ದಾಖಲೆ ಪೃಥ್ವಿ ಶಾ ಅವರ ಹೆಸರಿನಲ್ಲಿತ್ತು. 2022ರ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯದ ಪರ ಆಡಿದ್ದ ಪೃಥ್ವಿ ಶಾ ಎರಡು ಇನಿಂಗ್ಸ್‌ಗಳಿಂದ ಒಟ್ಟು 202 ರನ್ ಗಳಿಸಿದ್ದರು. ಆಗ ಅವರಿಗೆ 22 ವರ್ಷ 316 ದಿನಗಳ ವಯಸ್ಸಾಗಿತ್ತು.
ಆದರೆ ಇದೀಗ ಕೇವಲ 15ನೇ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 92 ಮತ್ತು 40 ರನ್‌ಗಳ ಮೂಲಕ ಒಟ್ಟು 132 ರನ್ ಗಳಿಸಿರುವ ವೈಭವ್, ದುಲೀಪ್ ಟ್ರೋಫಿಯ ನಿರ್ಣಾಯಕ ಪಂದ್ಯದಲ್ಲಿ ಯುವ ಪ್ರತಿಭೆಯಾಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.





