ಚಂಡೀಗಢ ಆ. 30: ಪಂಜಾಬ್‌ನಲ್ಲಿ 28 ವರ್ಷದ ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ಮೇಲೆ ನಡೆದಿದ್ದ ಭೀಕರ ದಾಳಿ ಪ್ರಕರಣ ಇದೀಗ ದುರಂತ ಅಂತ್ಯ ಕಂಡಿದೆ. ಅಪಹರಿಸಿ, ಹಲ್ಲೆ ನಡೆಸಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಗಿದ್ದ ಮಂಜೀತ್ ಕೌರ್ ಅವರು ಚಿಕಿತ್ಸೆ ಫಲಿಸದೇ ಆಗಸ್ಟ್ 26ರಂದು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಂಜೀತ್ ಕೌರ್ ಅವರನ್ನು ಜುಲೈ 3ರಂದು ಚಂಡೀಗಢದ ಸೆಕ್ಟರ್ 34ರಲ್ಲಿರುವ ಮದ್ಯದಂಗಡಿಯ ಸಮೀಪದಿಂದ ಅಪಹರಿಸಲಾಗಿತ್ತು ಎಂದು ಅವರ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಶುಭಿ ಮತ್ತು ಪಿಂಡಾ ಎಂಬ ಇಬ್ಬರು ಪರಿಚಯಸ್ಥರು ಮಂಜೀತ್ ಅವರನ್ನು ಭೇಟಿಯಾಗಲು ಕರೆಸಿಕೊಂಡು, ಬಳಿಕ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ರೂಪನಗರ ಜಿಲ್ಲೆಯ ಮೊರಿಂಡಾಗೆ ಕರೆದೊಯ್ದಿದ್ದರು ಎನ್ನಲಾಗಿದೆ.
ಅಲ್ಲಿ ಮಂಜೀತ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಬಳಿಕ ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅವರ ಸ್ನೇಹಿತರೊಬ್ಬರು ಕಂಬಳಿ ಬಳಸಿ ಬೆಂಕಿ ನಂದಿಸಿ ಮಂಜೀತ್ ಅವರನ್ನು ರಕ್ಷಿಸಿದ್ದರು ಎಂದು ವರದಿಯಾಗಿದೆ.
ಘಟನೆಯಲ್ಲಿ ಮಂಜೀತ್ ಅವರಿಗೆ ಶೇಕಡಾ 50ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿದ್ದವು. ಮೊದಲು ಮೊರಿಂಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಮೊಹಾಲಿಗೆ ಸ್ಥಳಾಂತರಿಸಲಾಗಿದ್ದು, ಗಂಭೀರ ಸ್ಥಿತಿಯ ಹಿನ್ನೆಲೆಯಲ್ಲಿ ಜುಲೈ 9ರಂದು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹಲವಾರು ವಾರಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಂಜೀತ್ ಅವರಿಗೆ ಆಗಸ್ಟ್ 5ರಂದು ಅಲ್ಪಕಾಲ ಪ್ರಜ್ಞೆ ಮರಳಿತ್ತು. ಈ ವೇಳೆ ತಮ್ಮೊಂದಿಗೆ ನಡೆದ ಘಟನೆಯನ್ನು ಕುಟುಂಬಸ್ಥರಿಗೆ ವಿವರಿಸಿದ್ದರು ಎನ್ನಲಾಗಿದೆ. ಆದರೆ ಬಳಿಕ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಆಗಸ್ಟ್ 26ರಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಇದಕ್ಕೂ ಮುನ್ನ ಜುಲೈ 28ರಂದು ಮಂಜೀತ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರ ಸ್ನೇಹಿತೆ ಗಿಲ್ ಮೊಹಾಲಿ ಜೊತೆಗಿನ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ಮಂಜೀತ್ ಚೇತರಿಸಿಕೊಳ್ಳುತ್ತಿದ್ದಾರೆ, ಶೀಘ್ರದಲ್ಲೇ ಸ್ವತಃ ಲೈವ್ ಬಂದು ತಮ್ಮ ಮೇಲಾದ ಅನ್ಯಾಯದ ಬಗ್ಗೆ ಮಾತನಾಡಲಿದ್ದಾರೆ ಎಂದು ಅದರಲ್ಲಿ ತಿಳಿಸಲಾಗಿತ್ತು. ಆದರೆ ಆಕೆ ಜನರ ಮುಂದೆ ಬಂದು ತಮ್ಮ ನೋವನ್ನು ಹೇಳಿಕೊಳ್ಳುವ ಅವಕಾಶವೇ ಸಿಗಲಿಲ್ಲ.
ಮಂಜೀತ್ ಅವರ ಸಾವಿನ ಬಳಿಕ ಪೊಲೀಸರು ಪ್ರಕರಣದಲ್ಲಿ ಮತ್ತಷ್ಟು ಗಂಭೀರ ಸೆಕ್ಷನ್‌ಗಳನ್ನು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 140(1) ಅಡಿಯಲ್ಲಿ ಅಪಹರಣ ಹಾಗೂ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ದಾಳಿಯ ಹಿಂದಿನ ನಿಖರ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿಗಳಾದ ಶುಭಿ ಮತ್ತು ಪಿಂಡಾ ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಮಂಜೀತ್ ಕೌರ್ ವಿಚ್ಛೇದನ ಪಡೆದಿದ್ದು, ಅವರಿಗೆ ಏಳು ವರ್ಷದ ಮಗನಿದ್ದಾನೆ ಎಂದು ವರದಿಯಾಗಿದೆ. ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.





