ಬೆಂಗಳೂರು ಆ.29: ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹೇಳುವಂತ್ತಿಲ್ಲ, ಅದರಲ್ಲಿಯೂ ವೀಕೆಂಡ್ ಬಂದರೆ ಸಾಕು ಟ್ರಾಫಿಕ್ ಜನ ಸುಸ್ತಾಗಿ ಹೋಗುತ್ತಾರೆ. ಬೆಂಗಳೂರಿನ ಜನ ದಟ್ಟಣೆ, ವಾಹನಗಳ ಹೆಚ್ಚಳದಿಂದ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಬೆಂಗಳೂರು–ನೆಲಮಂಗಲ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡುವಂತಾಗಿದೆ. ಬೆಳಗ್ಗೆಯಿಂದ ಆರಂಭವಾದ ಟ್ರಾಫಿಕ್ ಜಾಮ್ ರಾತ್ರಿ ವೇಳೆಯಾದರೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ.
ರಾಷ್ಟ್ರೀಯ ಹೆದ್ದಾರಿ 48 ಹಾಗೂ 75ರಲ್ಲಿ ಹಲವು ಕಿಲೋಮೀಟರ್‌ಗಳಷ್ಟು ವಾಹನಗಳು ಸಾಲುಗಟ್ಟಿ ನಿಂತಿವೆ. ಕೆಲವೆಡೆ ವಾಹನಗಳು ನಿಂತಲ್ಲೇ ನಿಂತಿದ್ದರೆ, ಇನ್ನೂ ಕೆಲವು ಕಡೆ ನಿಧಾನಗತಿಯಲ್ಲಿ ಸಂಚರಿಸುತ್ತಿವೆ. ಇದರಿಂದ ದೂರದ ಊರುಗಳಿಗೆ ವೀಕೆಂಡ್ ಹಿನ್ನೆಲೆಯಲ್ಲಿ ತೆರಳುತ್ತಿದ್ದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ನಗರದಿಂದ ನೆಲಮಂಗಲದತ್ತ ತೆರಳುವ ಮಾರ್ಗದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಶೇಷವಾಗಿ ವಾರಾಂತ್ಯದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಉಲ್ಬಣಿಸುತ್ತಿದೆ. 22 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿರುವುದರಿಂದ ಪ್ರತಿದಿನವೂ ಸಾವಿರಾರು ವಾಹನಗಳು ಈ ಮಾರ್ಗವನ್ನು ಅವಲಂಬಿಸಿವೆ.
ಭಾರೀ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ವಾಹನಗಳನ್ನು ಸುಗಮವಾಗಿ ಚಲಿಸುವಂತೆ ಮಾಡಲು ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ, ಪದೇಪದೇ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ. ಪ್ರಮುಖ ಹೆದ್ದಾರಿಯಾಗಿದ್ದರೂ ವಾರಾಂತ್ಯದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಮಾಡದಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದೆ.
ವೀಕೆಂಡ್ ದಿನಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಸಂಚಾರ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.





