ಯಶ್ ಪ್ರವಾಹವೂ ಹೌದು.. ಪ್ರಳಯವೂ ಹೌದು. ಅವರ ವಿರುದ್ಧ ಯಾರೇ ಈಜೋಕೆ ಬಂದ್ರೂ ಅದರ ಎಫೆಕ್ಟ್ ನೆಕ್ಸ್ಟ್ ಲೆವೆಲ್ ಇರುತ್ತೆ ಅನ್ನೋದು ಪರಭಾಷಿಗರಿಗೆ ಮನದಟ್ಟಾಗ್ತಿದೆ. ಯಶ್ ಹಾಗೂ ಟಾಕ್ಸಿಕ್ ವಿರುದ್ಧ ಪಿತೂರಿ ಮಾಡ್ತಿದ್ದ ಪರಭಾಷಿಗರಿಗೆ ಸ್ಯಾಂಡಲ್‌ವುಡ್ ಬಿಗ್ ಸ್ಟಾರ್ಸ್ ಅಖಾಡಕ್ಕೆ ಇಳಿದು ಕೌಂಟರ್ ಅಟ್ಯಾಕ್ ಮಾಡಿದ್ದಾರೆ. 250 ಕೋಟಿಗೂ ಅಧಿಕ ಪೈಸಾ ವಸೂಲ್ ಮಾಡಿರೋ ಟಾಕ್ಸಿಕ್ ಬಗ್ಗೆ ಯಾವ್ಯಾವ ಸ್ಟಾರ್ ಏನಂದ್ರು ಅಂತೀರಾ..? ಇಲ್ಲಿದೆ ನೋಡಿ
- ಟಾಕ್ಸಿಕ್‌ಗೆ ಉಪ್ಪಿ, ಕಿಚ್ಚ, ಶಿವಣ್ಣ ಬಲ.. ಟಿಕೆಟ್‌ಗೆ ಯೂತ್ ಸೈಕ್..!
- ನಮ್ಮ ಯಶ್ ಟಾರ್ಗೆಟ್.. ಸ್ಯಾಂಡಲ್‌ವುಡ್ ಕೌಂಟರ್ ಅಟ್ಯಾಕ್
- ರಾಕಿಭಾಯ್ ನಾಗಾಲೋಟ ತಡೆಯೋಕಾಗಿಲ್ಲ.. ನೆಗೆಟಿವಿಟಿ ಆಟ
- 250 ಕೋಟಿ ಕ್ಲಬ್‌ಗೆ ಟಾಕ್ಸಿಕ್.. ಯಶ್ ಪರ ಇಂಡಸ್ಟ್ರಿ ಒಗ್ಗಟ್ಟು..!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಿ ಕೇವಲ ಮೂರೇ ದಿನಕ್ಕೆ ಬರೋಬ್ಬರಿ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ರಿಲೀಸ್ ಆದಾಗಿನಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಕಲೆಕ್ಷನ್ ವಿಚಾರದಲ್ಲಿ ಯಶ್ ಮಾನ್‌ಸ್ಟರ್ ರೇಂಜ್ ತೋರಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ತೆಲುಗು ರಾಜ್ಯಗಳಲ್ಲಿ ಈ ಸಿನಿಮಾದ ವಿರುದ್ಧ ದೊಡ್ಡ ಮಟ್ಟದ ನೆಗೆಟಿವ್ ಪ್ರಚಾರ ಮತ್ತು ಅಪಪ್ರಚಾರ ಶುರುವಾಗಿದ್ದು, ತೆಲುಗಿನ ಇರುಮುಡಿ ಸಿನಿಮಾದ ಗಳಿಕೆಗೆ ಟಾಕ್ಸಿಕ್ ಅಡ್ಡಿವಾಯಿತು ಎಂಬ ಕಾರಣಕ್ಕೆ ಅಲ್ಲಿನ ಚಿತ್ರಮಂದಿರಗಳಿಂದ ಕನ್ನಡದ ಈ ಬಿಗ್ ಬಜೆಟ್ ಸಿನಿಮಾವನ್ನು ಕಿತ್ತುಹಾಕುವ ಮಟ್ಟಿಗೆ ವಿವಾದ ಕಾವು ಪಡೆದುಕೊಂಡಿದೆ.
ಕರ್ನಾಟಕದಲ್ಲಿ ತೆಲುಗು ಸಿನಿಮಾಗಳಿಗೆ ಅದ್ಧೂರಿ ಸ್ವಾಗತ ಸಿಗುತ್ತಿರುವಾಗ, ಆಂಧ್ರ ಮತ್ತು ತೆಲಂಗಾಣದಲ್ಲಿ ಕನ್ನಡ ಚಿತ್ರಕ್ಕೆ ಈ ರೀತಿಯ ತಾರತಮ್ಯ ಉಂಟಾಗಿದ್ದನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಕೆಂಡಾಮಂಡಲವಾಗಿದ್ದರು. ನಮ್ಮ ಕನ್ನಡದ ಸ್ಟಾರ್‌ಗಳು ಎಲ್ಲಿದ್ದಾರೆ..? ಅವರ ಭಾಷಾ ಪ್ರಜ್ಞೆ ಎಲ್ಲಿ ಹೋಯ್ತು? ಎಂದು ನೆಟ್ಟಿಗರು ಪ್ರಶ್ನೆ ಎತ್ತುತ್ತಿದ್ದಂತೆ, ಇದೀಗ ಇಡೀ ಸ್ಯಾಂಡಲ್‌ವುಡ್ ಅಂಗಳವೇ ಯಶ್ ಬೆನ್ನಿಗೆ ಭಂಡಾರವಾಗಿ ನಿಂತಿದೆ. ಕರುನಾಡಿನ ಸೂಪರ್‌ಸ್ಟಾರ್‌ಗಳು ಒಬ್ಬೊಬ್ಬರಾಗಿ ಎಂಟ್ರಿ ಕೊಟ್ಟು ಟಾಕ್ಸಿಕ್ ಸಿನಿಮಾ ಕನ್ನಡ ಚಿತ್ರರಂಗದ ಹೆಮ್ಮೆ ಎಂದು ಹಾಡಿಹೊಗಳುತ್ತಿದ್ದಾರೆ.
ರಿಯಲ್ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಕೊಂಡಾಡಿದ್ದು, ಟಾಕ್ಸಿಕ್ ದೊಡ್ಡವರಿಗಾಗಿ ಮಾಡಿದ ಒಂದು ಅದ್ಭುತ ಕಾಲ್ಪನಿಕ ಕಥೆ. ಇದೊಂದು ಸಂಪೂರ್ಣ ಹೊಸ ಲೋಕ ಮತ್ತು ಹೊಸ ಅನುಭವ. ಯಶ್ ಹಾಗೂ ಇಡೀ ಚಿತ್ರತಂಡದ ಶ್ರಮಕ್ಕೆ ನನ್ನ ಹ್ಯಾಟ್ಸ್ ಆಫ್ ಎಂದು ಮುಕ್ತ ಕಂಠದಿಂದ ಹೊಗಳಿದ್ದಾರೆ. ಇನ್ನೊಂದೆಡೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿ, ಸಾಮಾನ್ಯ ಫಾರ್ಮುಲಾ ಸಿನಿಮಾವನ್ನು ಬ್ರೇಕ್ ಮಾಡಿ, ಇಂತಹ ವಿಭಿನ್ನ ಹಾಗೂ ಧೈರ್ಯದ ಪ್ರಯೋಗಕ್ಕೆ ಕೈಹಾಕಲು ವಿಶೇಷ ಮನಸ್ಥಿತಿ ಬೇಕು. ಯಶ್ ಅವರ ಈ ಹೊಸ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು ಎಂದು ರಾಕಿಭಾಯ್ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಮತ್ತೊಂದೆಡೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಮುಂಬೈನಲ್ಲಿ ಮಾಧ್ಯಮಗಳ ಮುಂದೆ ಯಶ್ ಪರವಾಗಿ ಬ್ಯಾಟಿಂಗ್ ಮಾಡಿದ್ದು, ಯಶ್ ಏನೋ ಹೊಸದಾಗಿ ಪ್ರಯತ್ನ ಮಾಡಿದ್ದಾರೆ. ಹೊಸ ಕಥೆ ಹೇಳಲು ಪ್ರತಿಯೊಬ್ಬರಿಗೂ ಹಕ್ಕಿದೆ, ಯಶ್ ಮತ್ತು ಅವರ ತಂಡಕ್ಕೆ ಒಳ್ಳೆಯದಾಗಲಿ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇವರ ಜೊತೆಗೆ ನಿರ್ದೇಶಕರಾದ ಮಂಸೋರೆ, ಎ.ಪಿ. ಅರ್ಜುನ್, ಆರ್ ಚಂದ್ರು ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖ ತಂತ್ರಜ್ಞರು ಕೂಡ ಯಶ್ ಬೆಂಬಲಕ್ಕೆ ನಿಂತಿದ್ದು, ಪರಭಾಷೆಯ ಕುತಂತ್ರಕ್ಕೆ ಸ್ಯಾಂಡಲ್‌ವುಡ್ ಒಗ್ಗಟ್ಟಿನ ಉತ್ತರ ನೀಡಿದೆ.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ, ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ವರ್ಲ್ಡ್ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಹಾಲಿವುಡ್ ನಟ ಕೈಲ್ ಪೌಲ್ ಅಭಿನಯಿಸಿದ್ದಾರೆ. ಎಷ್ಟೇ ನೆಗೆಟಿವಿಟಿ ಬಂದರೂ, ಸ್ಯಾಂಡಲ್‌ವುಡ್ ದಿಗ್ಗಜರ ಬೆಂಬಲ ಮತ್ತು ಅಭಿಮಾನಿಗಳ ಅಪಾರ ಪ್ರೀತಿಯಿಂದ ಟಾಕ್ಸಿಕ್ ಬಾಕ್ಸ್ ಆಫೀಸ್ ಧೂಳಿಪಟ ಮಾಡುತ್ತ ಮುನ್ನುಗ್ಗುತ್ತಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





