ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣನ ಲೈಫ್ ಇಲ್ಲಿಯ ತನಕ ಒಂದು ಲೆಕ್ಕ ಆದ್ರೆ ಇನ್ಮೇಲೆ ಹೊಸ ಲೆಕ್ಕ. ಯಾಕಂದ್ರೆ ಅವ್ರ ಲೈಫ್‌ಗೆ ವೈಫ್ ಬಂದಾಯ್ತು. ಚಿಕ್ಕು ಜೀವನ ಪಾವನ ಆಗಿಸೋಕೆ ಪಾವನಾ ಗೌಡ ಎಂಟ್ರಿ ಕೊಟ್ಟಿದ್ದು, ಅರಮನೆ ನಗರಿ ಮೈಸೂರಲ್ಲಿ ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ಸಪ್ತಪದಿ ತುಳಿಯುತ್ತಿದ್ದಾರೆ.
- ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಕಲ್ಯಾಣಕ್ಕೆ ಮೈಸೂರು ಸಜ್ಜು
- ಸ್ಪೆಕ್ಟ್ರಾ ಸೆಂಟರ್‌ನಲ್ಲಿ ಸಿಂಗಾರ.. ಒಕ್ಕಲಿಗ ಸಂಪ್ರದಾಯದಂತೆ ಮದ್ವೆ
- ರಿಸೆಪ್ಷನ್‌ಗೆ ಗಣ್ಯರ ದಂಡು.. ಹುಣಸೂರು ರಸ್ತೆ ಟ್ರಾಫಿಕ್ ಅಲರ್ಟ್
- ಚಿಕ್ಕಣ್ಣ ಕಲ್ಯಾಣಕ್ಕೆ ಹೈಟೆಕ್ ಸೆಕ್ಯೂರಿಟಿ.. AI ಕ್ಯಾಮೆರಾ ಕಣ್ಗಾವಲು..!
ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ವಿಶಿಷ್ಟ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟ ಚಿಕ್ಕಣ್ಣ, ಇದೀಗ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿ ಸಪ್ತಪದಿ ತುಳಿಯಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಹಿರಿಯರು ನಿಶ್ಚಯಿಸಿರುವ ಈ ಶುಭ ವಿವಾಹದಲ್ಲಿ ಉದ್ಯಮಿ ಪಾವನಾ ಗೌಡ ಅವರ ಕೈಹಿಡಿಯುತ್ತಿರುವ ಚಿಕ್ಕಣ್ಣ, ಮೈಸೂರಿನ ಪ್ರಸಿದ್ಧ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್ ನಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮದುವೆ ಮುನ್ನ ನಡೆದ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಶ್ರೀರಂಗಪಟ್ಟಣದ ಮಹದೇವಪುರದಲ್ಲಿರುವ ಭಾವಿ ವಧು ಪಾವನಾ ನಿವಾಸದಲ್ಲಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ. ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ ಪಾವನಾ ಹಾಗೂ ಚಿಕ್ಕಣ್ಣ ಜೋಡಿಯ ಹಳದಿ ಸಂಭ್ರಮದ ವೀಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಂದಿನಿಂದಲೇ ಮದುವೆಯ ಅಸಲಿ ಹವಾ ಆರಂಭವಾಗುತ್ತಿದ್ದು, ಸಂಜೆ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ. ನಾಳೆ ಅಂದರೆ ಆಗಸ್ಟ್ 30 ರಂದು ಬೆಳಗಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನೆರವೇರಲಿದೆ. ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಸಂಪೂರ್ಣ ಹಿಂದೂ ಒಕ್ಕಲಿಗ ಸಂಪ್ರದಾಯದಂತೆ ವೈಭವದಿಂದ ವಿವಾಹ ಮಹೋತ್ಸವ ಜರುಗಲಿದೆ.
ಈ ಅದ್ಧೂರಿ ಮದುವೆಗೆ ಸ್ಯಾಂಡಲ್‌ವುಡ್‌ನ ಪ್ರಮುಖ ಗಣ್ಯರು ಹರಿದುಬರಲಿದ್ದು, ಚಿತ್ರರಂಗದ ತಾರೆಯರು, ರಾಜಕಾರಣಿಗಳು ಹಾಗೂ ಪ್ರಮುಖ ಗಣ್ಯರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಮದುವೆ ಮಂಟಪದ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಜೊತೆಗೆ ಬಂದಿರುವ ಮಾಧ್ಯಮ ಮಿತ್ರರಿಗೆ ಸುಲಭವಾಗಿ ವರದಿ ಮಾಡಲು ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್ ಸುತ್ತಮುತ್ತ ಇಂದಿನಿಂದ ಭಾರಿ ಪ್ರಮಾಣದ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಮೈಸೂರು ನಗರ ಪೊಲೀಸರು ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಎಐ ತಂತ್ರಜ್ಞಾನದ ಹೈ-ಟೆಕ್ ಸಂಚಾರ ಕ್ಯಾಮೆರಾಗಳನ್ನು ಅಳವಡಿಸಿದ್ದು, ಸಂಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ದೊಡ್ಡ ಮಟ್ಟದ ಕಾರ್ಯಕ್ರಮ ಇರುವುದರಿಂದ ಹುಣಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ಟ್ರಾಫಿಕ್ ಡೈವರ್ಷನ್ ಮಾಡುವ ಸಾಧ್ಯತೆಯೂ ಇದೆ.
ಚಿಕ್ಕಣ್ಣ-ಪಾವನಾ ಕಲ್ಯಾಣ ಮಹೋತ್ಸವಕ್ಕೆ ಆಗಮಿಸುತ್ತಿರುವ ಅತಿಥಿಗಳು ಟ್ರಾಫಿಕ್ ಜಾಮ್ ಹಾಗೂ ಸೆಕ್ಯೂರಿಟಿ ತಪಾಸಣೆಯ ವಿಳಂಬ ತಪ್ಪಿಸಲು ಕನಿಷ್ಠ 30 ರಿಂದ 45 ನಿಮಿಷ ಮುಂಚಿತವಾಗಿ ತಲುಪುವುದು ಸೂಕ್ತ. ಟ್ರಾಫಿಕ್‌ನಿಂದ ಮುಕ್ತಿ ಪಡೆಯಲು ಹಿಂಕಳ ಜಂಕ್ಷನ್ ಬಳಿ ಇಳಿದು ಬರುವುದು ಉತ್ತಮ ಎಂದು ಸಲಹೆ ನೀಡಲಾಗಿದ್ದು, ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೈ-ಟೆಕ್ ಎಐ ಕ್ಯಾಮೆರಾಗಳ ಕಣ್ಗಾವಲಿನ ನಡುವೆ ಚಿಕ್ಕಣ್ಣ ಮದುವೆ ಸಂಭ್ರಮ ಭರ್ಜರಿಯಾಗಿ ಕಳೆಗಟ್ಟಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





