ರಣವೀರ್ ಸಿಂಗ್ ಅಭಿನಯದ ಸೂಪರ್‌ಹಿಟ್ ಆಕ್ಷನ್ ಥ್ರಿಲ್ಲರ್ ‘ಧುರಂಧರ್’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಭಾರತೀಯ ಸಿನಿಮಾವಾಗಿ ‘ಧುರಂಧರ್’ ಹೊರಹೊಮ್ಮಿದ್ದು, ಓಟಿಟಿ ವೇದಿಕೆಯಲ್ಲಿ ಭಾರತೀಯ ಚಿತ್ರರಂಗದ ಸಾಧನೆಗೆ ಮತ್ತೊಂದು ಮಹತ್ವದ ಅಧ್ಯಾಯವನ್ನು ಸೇರಿಸಿದೆ. ನೆಟ್‌ಫ್ಲಿಕ್ಸ್ ತನ್ನ ಇತ್ತೀಚಿನ ವೀಕ್ಷಕರ ವರದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಆದಿತ್ಯ ಧಾರ್ ನಿರ್ದೇಶನದ ಈ ಸಿನಿಮಾ ಬರೋಬ್ಬರಿ 37 ಮಿಲಿಯನ್ ವೀಕ್ಷಣೆಗಳನ್ನು ಪಡೆದು, ನೆಟ್‌ಫ್ಲಿಕ್ಸ್‌ನ ಇಂಗ್ಲಿಷೇತರ ಚಿತ್ರಗಳ ವಿಭಾಗದಲ್ಲಿ ಭಾರತೀಯ ಸಿನಿಮಾಗಳ ಪೈಕಿ ಅಗ್ರಸ್ಥಾನಕ್ಕೇರಿದೆ. ರಣವೀರ್ ಸಿಂಗ್ ಅವರ ಅದ್ಭುತ ಅಭಿನಯದ ಜೊತೆಗೆ ಆರ್. ಮಾಧವನ್, ಅಕ್ಷಯ್ ಖನ್ನಾ, ಸಂಜಯ್ ದತ್ ಹಾಗೂ ಅರ್ಜುನ್ ರಾಂಪಾಲ್ ಅವರ ಪ್ರಭಾವಿ ಪಾತ್ರಗಳು ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣಗಳಾಗಿವೆ.
ಕಳೆದ ವರ್ಷ ಡಿಸೆಂಬರ್ 5ರಂದು ಬಿಡುಗಡೆಯಾದ ‘ಧುರಂಧರ್’ ಕಥೆಯು ಭಾರತದ ವ್ಯಕ್ತಿಯೊಬ್ಬ ಪಾಕಿಸ್ತಾನಕ್ಕೆ ತೆರಳಿ ರಹಸ್ಯ ಗೂಢಚಾರನಾಗಿ ಕಾರ್ಯನಿರ್ವಹಿಸುವ ರೋಚಕ ಘಟನಾವಳಿಗಳ ಸುತ್ತ ಹೆಣೆದಿದೆ. ದೇಶಭಕ್ತಿ, ಸಾಹಸ, ಗುಪ್ತಚರ ಕಾರ್ಯಾಚರಣೆ ಹಾಗೂ ಭಾವನಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಚಿತ್ರಮಂದಿರಗಳಲ್ಲಿಯೇ ಭರ್ಜರಿ ಯಶಸ್ಸು ಗಳಿಸಿತ್ತು. ಬಳಿಕ ಓಟಿಟಿಯಲ್ಲೂ ಅದೇ ಜನಪ್ರಿಯತೆಯನ್ನು ಮುಂದುವರಿಸಿಕೊಂಡಿದೆ. ಚಿತ್ರದ ಸೀಕ್ವೆಲ್ ಕೂಡ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದು ದಾಖಲೆ ಬರೆದಿರುವುದು ವಿಶೇಷ.
ಇನ್ನು ನೆಟ್‌ಫ್ಲಿಕ್ಸ್ ಇಂಡಿಯಾದ ಒರಿಜಿನಲ್ ಕಂಟೆಂಟ್ ವಿಭಾಗದಲ್ಲಿಯೂ ಭಾರತೀಯ ಸರಣಿಗಳು ಪ್ರೇಕ್ಷಕರ ಮನಗೆದ್ದಿವೆ. ಅನುಭೂತಿ ಕಶ್ಯಪ್ ನಿರ್ದೇಶನದ ‘ಅಕ್ಯೂಸ್ಡ್’ ಸರಣಿಯು 19 ಮಿಲಿಯನ್ ವೀಕ್ಷಣೆಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೊಂಕಣ ಸೇನ್ ಶರ್ಮಾ ಮತ್ತು ಪ್ರತಿಭಾ ರಾಂಟಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಸರಣಿ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿದೆ.
ಪ್ರಿಯಾಂಕಾ ಮೋಹನ್ ಅಭಿನಯದ ‘ಮೇಡ್ ಇನ್ ಕೊರಿಯಾ’ ಸಿನಿಮಾ 18 ಮಿಲಿಯನ್ ವೀಕ್ಷಣೆಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ತಮಿಳುನಾಡಿನ ಯುವತಿಯೊಬ್ಬಳು ದಕ್ಷಿಣ ಕೊರಿಯಾದ ಸಿಯೋಲ್‌ಗೆ ತೆರಳಿ ಹೊಸ ಬದುಕಿನ ಕನಸು ಕಟ್ಟುವ ಕಥಾಹಂದರ ಈ ಚಿತ್ರದಲ್ಲಿದೆ.
ಇಮ್ರಾನ್ ಹಶ್ಮಿ ಅಭಿನಯದ ‘ತಸ್ಕರಿ’ ಸರಣಿಯು 16 ಮಿಲಿಯನ್ ವೀಕ್ಷಣೆಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ನಡೆಯುವ ಸ್ಮಗ್ಲಿಂಗ್ ಜಾಲವನ್ನು ಕಸ್ಟಮ್ಸ್ ಅಧಿಕಾರಿಗಳು ಹೇಗೆ ಮಟ್ಟಹಾಕುತ್ತಾರೆ ಎಂಬ ರೋಚಕ ಕಥೆಯನ್ನು ಈ ಸರಣಿ ತೆರೆದಿಡುತ್ತದೆ.
ಜಾಗತಿಕ ಮಟ್ಟದ ಅಂತಾರಾಷ್ಟ್ರೀಯ ಸಿನಿಮಾಗಳ ಪಟ್ಟಿಯಲ್ಲಿ ‘ವಾರ್ ಮೆಷಿನ್’ ಸಿನಿಮಾ 147 ಮಿಲಿಯನ್ ವೀಕ್ಷಣೆಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ‘ದಿ ಆರ್‌ಐಪಿ’ (136 ಮಿಲಿಯನ್), ‘ಸ್ವಾಪ್ಡ್’ (131 ಮಿಲಿಯನ್), ‘ಕೆ-ಪಾಪ್ ಡೆಮನ್ ಹಂಟರ್ಸ್’ (130 ಮಿಲಿಯನ್) ಹಾಗೂ ‘ಅಪೆಕ್ಸ್’ (129 ಮಿಲಿಯನ್) ಚಿತ್ರಗಳು ಸ್ಥಾನ ಪಡೆದಿವೆ. ವೆಬ್ ಸರಣಿಗಳ ವಿಭಾಗದಲ್ಲಿ ‘ಹಿಸ್ ಅಂಡ್ ಹರ್ಸ್’ ಸರಣಿಯು 104 ಮಿಲಿಯನ್ ವೀಕ್ಷಣೆಗಳೊಂದಿಗೆ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.





