ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡಿರುವ ಕರ್ನಾಟಕದ ನಾಲ್ಕು ಪ್ರಮುಖ ರೈಲ್ವೆ ನಿಲ್ದಾಣಗಳು ಜುಲೈ 17ರಂದು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ದೇಶದಾದ್ಯಂತ ಮರುನಿರ್ಮಾಣಗೊಂಡ 75 ರೈಲ್ವೆ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮದ ಭಾಗವಾಗಿ ಈ ನಾಲ್ಕು ನಿಲ್ದಾಣಗಳೂ ಸೇರ್ಪಡೆಯಾಗಿವೆ.
ಕೊಪ್ಪಳ ರೈಲ್ವೆ ನಿಲ್ದಾಣವನ್ನು ಸುಮಾರು ₹21.1 ಕೋಟಿ ವೆಚ್ಚದಲ್ಲಿ ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 580 ಮೀಟರ್ ಉದ್ದದ ವಿಶಾಲ ಪ್ಲಾಟ್ಫಾರ್ಮ್ ನಿರ್ಮಿಸಲಾಗಿದ್ದು, ಎಸ್ಕಲೇಟರ್, ಲಿಫ್ಟ್ ಹಾಗೂ ಒಂದು ಪ್ಲಾಟ್ಫಾರ್ಮ್‌ನಿಂದ ಮತ್ತೊಂದಕ್ಕೆ ಸುಲಭವಾಗಿ ಸಂಚರಿಸಲು ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲಾಗಿದೆ. ಹಿರಿಯ ನಾಗರಿಕರು ಹಾಗೂ ದಿವ್ಯಾಂಗರಿಗೆ ಅನುಕೂಲವಾಗುವಂತೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ವಿಶ್ರಾಂತಿ ಗೃಹಗಳನ್ನೂ ಅತ್ಯಾಧುನಿಕ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಬಾದಾಮಿಯ ರೈಲ್ವೆ ನಿಲ್ದಾಣವನ್ನು ₹15.1 ಕೋಟಿ ವೆಚ್ಚದಲ್ಲಿ ಮರುನಿರ್ಮಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ನಿಲ್ದಾಣದ ಪ್ರವೇಶ ದ್ವಾರವನ್ನು ದೇವಾಲಯದ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ವಿಶಾಲ ಪ್ಲಾಟ್ಫಾರ್ಮ್, ಎರಡು ಲಿಫ್ಟ್‌ಗಳು ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಎಸ್ಕಲೇಟರ್ ಸೌಲಭ್ಯವನ್ನೂ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಅಳ್ನಾವರ ರೈಲ್ವೆ ನಿಲ್ದಾಣವನ್ನು ₹17.20 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಸುಮಾರು 4,500 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ನಿಲ್ದಾಣದಲ್ಲಿ ಸುಸಜ್ಜಿತ ಪ್ಲಾಟ್ಫಾರ್ಮ್, ಪಾದಚಾರಿಗಳ ಮೇಲ್ಸೇತುವೆ, ಎರಡು ಲಿಫ್ಟ್‌ಗಳು, ಆಧುನಿಕ ಟಿಕೆಟ್ ಕೌಂಟರ್ ಹಾಗೂ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ದೊರೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೆ ನಿಲ್ದಾಣವನ್ನು ₹26.18 ಕೋಟಿ ವೆಚ್ಚದಲ್ಲಿ ಮರುನಿರ್ಮಿಸಲಾಗಿದೆ. ನಿರೀಕ್ಷಣಾ ಮಂದಿರ, ಟಿಕೆಟ್ ಕೌಂಟರ್ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ನವೀಕರಿಸಲಾಗಿದ್ದು, ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ಲಾಟ್ಫಾರ್ಮ್ ಅನ್ನು ವಿಸ್ತರಿಸಲಾಗಿದೆ. ಇದರಿಂದ ರೈಲು ಸಂಚಾರ ಮತ್ತು ಪ್ರಯಾಣಿಕರ ಅನುಕೂಲ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಈ ನಿಲ್ದಾಣಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಮೃತ ಭಾರತ ಯೋಜನೆಯಡಿ ರೈಲ್ವೆ ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಈ ಕಾಮಗಾರಿಗಳು ಪೂರ್ಣಗೊಂಡಿವೆ. ಈ ಕುರಿತು ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕ ವಿಭಾಗದ ನಿರೀಕ್ಷಕ ಪವನ್ ಮಾಹಿತಿ ನೀಡಿದ್ದಾರೆ.





