ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ನಡೆದ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ನಿದಾ ಖಾನ್ ಅನ್ನು ಛತ್ರಪತಿ ಸಂಭಾಜಿನಗರದಲ್ಲಿ ಜಂಟಿ ಕಾರ್ಯಾಚರಣೆಯ ಮೂಲಕ ಬಂಧಿಸಲಾಗಿದೆ.
ನಾಸಿಕ್ SIT, ಛತ್ರಪತಿ ಸಂಭಾಜಿನಗರ ಪೊಲೀಸ್ ಕಮಿಷನರೇಟ್ ಮತ್ತು ಅಪರಾಧ ವಿಭಾಗದ ಪೊಲೀಸರ ತಂಡವು ಎರಡು ದಿನಗಳಿಂದ ನಿಗಾ ಇಟ್ಟಿದ್ದ ಫ್ಲಾಟ್‌ನಿಂದ ನಿದಾ ಖಾನ್ ಅನ್ನು ಬಂಧಿಸಿದ್ದಾರೆ. ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ನಾಸಿಕ್‌ಗೆ ಕರೆದೊಯ್ಯಲಾಗಿದೆ.
ಮುಖ್ಯಾಂಶಗಳು:
- ನಾಸಿಕ್ ಟಿಸಿಎಸ್ ಘಟಕದಲ್ಲಿ ಬಲವಂತದ ಮತಾಂತರಕ್ಕೆ ಯತ್ನಿಸಿದ ಆರೋಪ
- ಸಹೋದರನ ಪರವಾಗಿ ಮಹಿಳೆಯನ್ನು ಮತಾಂತರಕ್ಕೆ ಒತ್ತಾಯಿಸಿದ ಆರೋಪ
- ತಲೆಮರೆಸಿಕೊಂಡಿದ್ದ ನಿದಾ ಖಾನ್ ಛತ್ರಪತಿ ಸಂಭಾಜಿನಗರದಲ್ಲಿ ಪತ್ತೆ
- ಗರ್ಭಿಣಿ ಎಂದು ಹೇಳಿಕೊಂಡು ನಿರೀಕ್ಷಣಾ ಜಾಮೀನು ಕೋರಿದ್ದು ನ್ಯಾಯಾಲಯದಿಂದ ನಿರಾಕರಣೆ
ನಿದಾ ಖಾನ್ 2021ರಲ್ಲಿ ಟಿಸಿಎಸ್‌ಗೆ ಪ್ರೊಸೆಸ್ ಅಸೋಸಿಯೇಟ್ ಆಗಿ ಸೇರಿದ್ದರು. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕಂಪನಿಯು ಆಕೆಯನ್ನು ಅಮಾನತುಗೊಳಿಸಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ ನಾಸಿಕ್ ಟಿಸಿಎಸ್ ಘಟಕದ ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿತು. ಆರೋಪಿ ದಾನಿಶ್ ಶೇಖ್ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದರು. ದಾನಿಶ್ ಈಗಾಗಲೇ ವಿವಾಹಿತನಾಗಿದ್ದ ವಿಷಯ ಮುಚ್ಚಿಡಲಾಗಿತ್ತು. ದಾನಿಶ್‌ನ ಸಹೋದರಿ ನಿದಾ ಖಾನ್ ದೂರುದಾರ ಮಹಿಳೆಯ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಮತಾಂತರಕ್ಕೆ ಒತ್ತಾಯಿಸಿದ್ದಾಳೆ ಎಂಬ ಆರೋಪವಿದೆ.
ಈ ಪ್ರಕರಣದಲ್ಲಿ ಇನ್ನೂ 7 ಮಹಿಳಾ ಉದ್ಯೋಗಿಗಳು ಹಿರಿಯ ಸಹೋದ್ಯೋಗಿಗಳಿಂದ ಮಾನಸಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದೇವೆ ಎಂದು ದೂರು ನೀಡಿದ್ದಾರೆ. ಟಿಸಿಎಸ್ ಕಂಪನಿಯು ಈ ವಿಷಯದಲ್ಲಿ ಆಂತರಿಕ ತನಿಖೆ ನಡೆಸುತ್ತಿದೆ ಎಂದು ಹೇಳಿದೆ.





