ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾದ ಕೇವಲ ಒಂದೇ ಗಂಟೆಯಲ್ಲಿ ಇಡೀ ರಾಜ್ಯದ ರಾಜಕೀಯ ಚಿತ್ರಣವೇ ತಲೆಕೆಳಗಾಗಿದೆ. ಆಡಳಿತಾರೂಢ ಡಿಎಂಕೆ ಮತ್ತು ವಿರೋಧ ಪಕ್ಷ ಎಐಎಡಿಎಂಕೆಗೆ ನಡುಕ ಹುಟ್ಟಿಸಿರುವ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK), ಆರಂಭಿಕ ಟ್ರೆಂಡ್‌ಗಳಲ್ಲಿ ಅಚ್ಚರಿಯ ಮುನ್ನಡೆ ಸಾಧಿಸಿ ಮುನ್ನುಗ್ಗುತ್ತಿದೆ.
ಕ್ಷಣ ಕ್ಷಣಕ್ಕೂ ರೋಚಕ ತಿರುವು :
ಬೆಳಿಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಆರಂಭವಾದಾಗ ಡಿಎಂಕೆ ಮತ್ತು ಟಿವಿಕೆ ನಡುವೆ ಸಮಬಲದ ಹೋರಾಟವಿತ್ತು. ಆದರೆ, 9 ಗಂಟೆಯ ಸುಮಾರಿಗೆ ಇವಿಎಂ ಮತಗಳ ಎಣಿಕೆ ವೇಗ ಪಡೆದುಕೊಳ್ಳುತ್ತಿದ್ದಂತೆ ವಿಜಯ್ ಅವರ ಟಿವಿಕೆ ಪಕ್ಷವು ರಾಜ್ಯದಾದ್ಯಂತ ಭರ್ಜರಿ ಕಮಾಲ್ ಮಾಡುತ್ತಿದೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ಟಿವಿಕೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಅಭ್ಯರ್ಥಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.
ಅರ್ಧ ಶತಕ ದಾಟಿದ ಟಿವಿಕೆ :
ಸದ್ಯದ ಲಭ್ಯವಿರುವ ಮಾಹಿತಿಯಂತೆ, ವಿಜಯ್ ನೇತೃತ್ವದ ಟಿವಿಕೆ ಪಕ್ಷವು 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅರ್ಧ ಶತಕದ ಗಡಿಯನ್ನು ಸುಲಭವಾಗಿ ದಾಟಿದೆ. ಕೆಲವು ಸಮೀಕ್ಷೆಗಳು (Axis My India) ನೀಡಿದ್ದ ಭವಿಷ್ಯದಂತೆಯೇ ವಿಜಯ್ ಹವಾ ತಮಿಳುನಾಡಿನಲ್ಲಿ ಜೋರಾಗಿದೆ. ಸ್ವತಃ ವಿಜಯ್ ಸ್ಪರ್ಧಿಸಿರುವ ಪೆರಂಬೂರ್ ಮತ್ತು ತಿರುಚ್ಚಿ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ದಾಖಲಿಸಿದ್ದಾರೆ.
ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟಗಳು ಈಗ ಟಿವಿಕೆ ಪಕ್ಷವನ್ನು ಮೀರಿಸಲು ಹೆಣಗಾಡುತ್ತಿವೆ. ಸ್ಟಾಲಿನ್ ಅವರ ಭದ್ರಕೋಟೆ ಎನ್ನಲಾದ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ಅವರು ಮುಖ್ಯಮಂತ್ರಿಯವರಿಗೇ ಕಠಿಣ ಸವಾಲು ನೀಡುತ್ತಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ.





