ಬೆಂಗಳೂರು: ಏಪ್ರಿಲ್ 29ರಂದು ಸಂಜೆ ಸುರಿದ ಭಾರೀ ಮಳೆ, ಗುಡುಗು ಸಿಡಿಲು ಮತ್ತು ಆಲಿಕಲ್ಲು ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಅವಾಂತರಗಳ ಮಹಾಪೂರವೇ ಹರಿದುಬಂದಿದೆ. ಕೆಲವು ನಿಮಿಷಗಳ ರಣ ಮಳೆಯೇ ನಗರದ ಅನೇಕ ರಸ್ತೆಗಳನ್ನು ನದಿಗಳಾಗಿದ್ದು, ಸಾರ್ವಜನಿಕ ಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ತುರ್ತು ಸಭೆ ಕರೆದು ಮಳೆ ಅವಾಂತರ ನಿಭಾಯಿಸುವ ಕುರಿತು ಚರ್ಚಿಸಿದ್ದಾರೆ.
ನಿನ್ನೆಯ ಮಳೆಯಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 111 ಮಿ.ಮೀ. ಮಳೆ ಸುರಿದಿದ್ದು, ಏಪ್ರಿಲ್ ತಿಂಗಳ 24 ಗಂಟೆಯ ದಾಖಲೆಯನ್ನು ಮುರಿದಿದೆ. ಬೌರಿಂಗ್ ಆಸ್ಪತ್ರೆಯ ಸಮೀಪ ಆಸ್ಪತ್ರೆಯ ಗೋಡೆ ಕುಸಿದು 10 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಮಕ್ಕಳೂ ಸೇರಿದ್ದಾರೆ. ಮಳೆಯಿಂದಾಗಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಮರಗಳು ಬಿದ್ದಿವೆ. ವಿಜಯನಗರ, ಆರ್.ಟಿ. ನಗರ, ಶೇಷಾದ್ರಿಪುರಂ, ಜಯನಗರ, ಕೋರಮಂಗಲ, ಬಿ.ಟಿ.ಎಂ. ಲೇಔಟ್, ಬಳಗೆರೆ, ಬೆಳ್ಳಂದೂರು, ನಾಗವಾರ ಮುಂತಾದ ಪ್ರದೇಶಗಳಲ್ಲಿ ತೀವ್ರ ನೀರು ನಿಂತಿದೆ.

ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಸಂಪೂರ್ಣ ಮುಳುಗಿದೆ. ಚರ್ಚ್ ಸ್ಟ್ರೀಟ್‌ನಂತಹ ಪ್ರಮುಖ ಸ್ಥಳಗಳಲ್ಲಿ ನೀರು ಹರಿದು ಅಂಗಡಿಗಳಿಗೆ ಹಾನಿಯಾಗಿದೆ. ಅನೇಕ ವಾಹನಗಳು ನೀರಿನಲ್ಲಿ ಸಿಲುಕಿ ಟ್ರಾಫಿಕ್ ಜಾಮ್ ಉಂಟಾಗಿದೆ. ಗುಡುಗು ಸಿಡಿಲು ಮತ್ತು ಬಲವಾದ ಗಾಳಿಯಿಂದ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸರಬರಾಜು ನಿಂತುಹೋಗಿದೆ.
ಸಿಎಂ–ಡಿಸಿಎಂ ತುರ್ತು ಸಭೆ
ಮಳೆ ಅವಾಂತರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ದಿಢೀರ್ ಸಭೆ ಕರೆದಿದ್ದಾರೆ. ಸಂಪುಟ ಸಭೆಗೂ ಮುನ್ನ ನಡೆದ ಈ ಸಭೆಯಲ್ಲಿ ಮಳೆಯಿಂದ ಉಂಟಾದ ಹಾನಿ, ತೆರವು ಕಾರ್ಯಾಚರಣೆಯ ಪ್ರಗತಿ ಮತ್ತು ಮುಂದಿನ ಕ್ರಮಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಬಿಬಿಎಂಪಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ಯಾವೆಲ್ಲಾ ಪ್ರದೇಶಗಳಲ್ಲಿ ಎಷ್ಟು ನೀರು ನಿಂತಿದೆ, ತೆರವು ಕಾರ್ಯ ಎಷ್ಟು ಪ್ರಗತಿಯಲ್ಲಿದೆ ಎಂಬುದನ್ನು ವರದಿ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರು ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಳೆ ನೀರು ತೆರವುಗೊಳಿಸುವಲ್ಲಿ ಶೇ.70ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ರಾತ್ರಿ ಒಂದು ಗಂಟೆಯವರೆಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಎನ್‌ಡಿಆರ್‌ಎಫ್ ತಂಡಗಳು, ಅಗ್ನಿಶಾಮಕ ದಳ ಮತ್ತು ಪೊಲೀಸರು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಸಿಎಂ ಅವರು ಮಳೆಯಿಂದ ಉಂಟಾದ ಹಾನಿಯನ್ನು ತ್ವರಿತವಾಗಿ ನಿವಾರಿಸಲು ಸೂಚಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸ್ಟಾರ್ಮ್ ವಾಟರ್ ಡ್ರೈನ್‌ಗಳನ್ನು ಸರಿಪಡಿಸುವುದು, ಅತಿಕ್ರಮಣ ತೆರವುಗೊಳಿಸುವುದು ಮತ್ತು ಮಳೆ ನೀರು ನಿರ್ವಹಣೆಗೆ ದೀರ್ಘಕಾಲೀನ ಯೋಜನೆಗಳನ್ನು ಜಾರಿಗೊಳಿಸುವುದು ಅಗತ್ಯವಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಐಎಂಡಿ ಉತ್ತರ ಮತ್ತು ಪೂರ್ವ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.





