ಉತ್ತರಾಖಂಡ್‌ನ ಖತಿಮಾ ಪ್ರದೇಶದಲ್ಲಿ ನಡೆದ ವಿಚಿತ್ರ ಹಾಗೂ ಆತಂಕಕಾರಿ ರಸ್ತೆ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ಕಾಡಾನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆಯ ದಂತ ಮುರಿದು ಹೋಗಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಈ ಘಟನೆ ಉತ್ತರಾಖಂಡ್‌ನ ಚಕರ್ಪುರ ಪ್ರದೇಶದ ಆನೆ ಕಾರಿಡಾರ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ನಿಕಿತಾ ಕಪ್ರಿ ಎಂಬ ಮಹಿಳೆ ತನ್ನ ಸ್ಕೂಟರ್‌ನಲ್ಲಿ ತನಕ್ಪುರದಿಂದ ಖತಿಮಾಕ್ಕೆ ವಾಪಸ್ಸಾಗುತ್ತಿದ್ದರು. ಅವರು ಖತಿಮಾದ ಹಿಂದ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದು, ಸಂಬಂಧಿಕರ ಮನೆಗೆ ಭೇಟಿ ನೀಡಿ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ.
ಮಂಗಳವಾರ ಬೆಳಿಗ್ಗೆ ನಡೆದ ಈ ಘಟನೆ ವೇಳೆ, ಬನ್ಬಾಸಾ ಮತ್ತು ಚಕರ್ಪುರ ನಡುವಿನ ದಟ್ಟ ಕಾಡು ಪ್ರದೇಶದಲ್ಲಿ ಆನೆ ಏಕಾಏಕಿ ರಸ್ತೆ ಮೇಲೆ ಬಂದಿತ್ತು. ರಸ್ತೆ ಮಧ್ಯೆ ಆನೆ ಕಾಣಿಸಿಕೊಂಡ ತಕ್ಷಣ ಮಹಿಳೆ ಗಾಬರಿಗೊಂಡಿದ್ದು, ಸ್ಕೂಟರ್ ನಿಯಂತ್ರಣ ತಪ್ಪಿ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಡಿಕ್ಕಿಯ ರಭಸಕ್ಕೆ ಆನೆಯ ಒಂದು ದಂತ ಮುರಿದು ಹೋಗಿದ್ದು, ಗಾಯಗೊಂಡ ಆನೆ ತಕ್ಷಣವೇ ಕಾಡಿನೊಳಗೆ ಓಡಿಹೋಗಿದೆ. ಘಟನೆಯಲ್ಲಿ ಮಹಿಳೆಗೂ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಗಾಯಗೊಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಯ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಆನೆಯ ಮುರಿದ ದಂತವನ್ನು ಅಧಿಕಾರಿಗಳು ವಶಪಡಿಸಿಕೊಂಡು ಸುರಕ್ಷಿತವಾಗಿ ಕಚೇರಿಯಲ್ಲಿ ಇರಿಸಿದ್ದಾರೆ. ಜೊತೆಗೆ ಗಾಯಗೊಂಡ ಆನೆಯ ಚಲನವಲನಗಳ ಮೇಲೆ ನಿಗಾ ಇಡಲು ಘಟನಾ ಸ್ಥಳದ ಸುತ್ತಮುತ್ತ ಎರಡು ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈ ಘಟನೆ ಬಳಿಕ ಅರಣ್ಯ ಇಲಾಖೆ ವಾಹನ ಸವಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಆನೆ ಕಾರಿಡಾರ್ ಪ್ರದೇಶಗಳಲ್ಲಿ ವಿಶೇಷ ಜಾಗ್ರತೆ ವಹಿಸುವಂತೆ ಮನವಿ ಮಾಡಿದೆ.
A female teacher crashed her Activa straight into an elephant on Khatima Road in Uttarakhand😭
The collision was so intense that the elephant’s tusks broke off and fell on the road.
The poor elephant somehow got up & ran away toward the jungle in fear. https://t.co/D8Lz7czUMT
— Bhakt Prahlad🚩 (@RakeshKishore_l) May 20, 2026
ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಘಟನೆ ಇದೇ ಮೊದಲ ಬಾರಿ ಕೇಳುತ್ತಿದ್ದೇವೆ” ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ರಸ್ತೆ ಸುರಕ್ಷತೆ ಕುರಿತು ಚರ್ಚೆ ಆರಂಭಿಸಿದ್ದು, ಮತ್ತಷ್ಟು ಎಚ್ಚರಿಕೆ ಫಲಕಗಳು ಮತ್ತು ವೇಗ ನಿಯಂತ್ರಣ ವ್ಯವಸ್ಥೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
