ಉತ್ತರ ಪ್ರದೇಶ: ಆತ್ಮಹತ್ಯೆ ಮಾಡಿಕೊಂಡ ಭಾವಿ ಪತ್ನಿಯ ಶವಕ್ಕೆ ತಾಳಿ ಕಟ್ಟಿದ ಯುವಕ!

ಪ್ರಿಯತಮೆಯ ಕೊನೆಯ ಆಸೆ ಈಡೇರಿಸಿದ ಪ್ರಿಯಕರ

Untitled design (70)

ಮಹಾರಾಜ್‌ಗಂಜ್: ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಕೃಷ್ಣ ನಗರದ 29 ವರ್ಷದ ಸನ್ನಿ ಮಧೇಸಿಯಾ ತಮ್ಮ ಭಾವಿ ಪತ್ನಿ ಪ್ರಿಯಾಂಕಾ ಮಾಧೇಸಿಯಾ (23) ಆತ್ಮಹತ್ಯೆ ಮಾಡಿಕೊಂಡ ನಂತರ ಆಕೆಯ ಮೃತದೇಹದೊಂದಿಗೆ ಮದುವೆಯಾಗಿ, ಆಕೆಯ ಕೊನೆಯ ಆಸೆಯನ್ನು ಈಡೇರಿಸಿದ ಘಟನೆ ಎಲ್ಲರ ಗಮನ ಸೆಳೆದಿದೆ.

ಹೌದು, ಪ್ರಿಯಾಂಕಾ ಮತ್ತು ಸನ್ನಿಯ ಮದುವೆಯು ನವೆಂಬರ್‌ಗೆ ನಿಗದಿಯಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ಇಬ್ಬರ ನಡುವೆ ಜಗಳವಾಯಿತು. ಈ ಜಗಳದಿಂದ ಮನನೊಂದ ಪ್ರಿಯಾಂಕಾ ಜೂನ್ 15ರ ರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ದುಃಖದ ಸುದ್ದಿ ಕೇಳಿ ಸನ್ನಿ ಆಘಾತಕ್ಕೊಳಗಾದನು.

ಪ್ರಿಯಾಂಕಾಳ ಅಂತಿಮ ಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿದ್ದಾಗ, ಸನ್ನಿ ಅಲ್ಲಿಗೆ ತೆರಳಿ, ಪುರೋಹಿತರ ಸಮ್ಮುಖದಲ್ಲಿ ಆಕೆಯ ಮೃತದೇಹಕ್ಕೆ ತಾಳಿ ಕಟ್ಟಿದನು. ಆಕೆಯ ಹಣೆಗೆ ಕುಂಕುಮ ಇಡುವಾಗ ಸನ್ನಿ ಭಾವುಕನಾಗಿ, “ಪ್ರಿಯಾಂಕಾಳ ಕನಸು ನನ್ನೊಂದಿಗೆ ಮದುವೆಯಾಗುವುದಾಗಿತ್ತು. ಆಕೆಯ ಕೊನೆಯ ಆಸೆಯನ್ನು ಈಡೇರಿಸುತ್ತೇನೆ,” ಎಂದು ಹೇಳಿದನು. ಈ ದೃಶ್ಯವನ್ನು ಕಂಡ ಸ್ಥಳೀಯರು ದಿಗ್ಭ್ರಮೆಗೊಂಡರೂ, ಸನ್ನಿಯ ನಿರ್ಧಾರಕ್ಕೆ ಸಹಾಯ ಮಾಡಿದರು.

ಮದುವೆಯ ಆರತಿ, ಮಂಗಲಸೂತ್ರ ಧಾರಣೆ ಸೇರಿದಂತೆ ಎಲ್ಲ ಶಾಸ್ತ್ರಗಳನ್ನು ಪ್ರಿಯಾಂಕಾಳ ಮೃತದೇಹಕ್ಕೆ ನೆರವೇರಿಸಲಾಯಿತು. ಈ ಘಟನೆ ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದ್ದು, ಸನ್ನಿಯ ಪ್ರೀತಿಯ ತೀವ್ರತೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

Exit mobile version