ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಯುವಕನೊಬ್ಬ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ.
ಹೌದು, ಕಲ್ಯಾಣ್‌ನ ನಂದಿವಲಿ ಪ್ರದೇಶದಲ್ಲಿರುವ ಡಾ. ಅನಿಕೇತ್ ಪಲಾಂಡೆ ಅವರ ಶ್ರೀ ಬಾಲಚಿಕಿತ್ಸಾಲಯ ಕ್ಲಿನಿಕ್‌ನಲ್ಲಿ ಈ ಘಟನೆ ಜುಲೈ 21ರ ಸಂಜೆ ನಡೆದಿದೆ. ಈ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋನಾಲಿ ಕಲಾಸರೆ (25) ಎಂಬ ಯುವತಿಯ ಮೇಲೆ ಗೋಕುಲ್ ಝಾ ಎಂಬ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಘಟನೆಯ ಸಂದರ್ಭದಲ್ಲಿ, ವೈದ್ಯರು ವೈದ್ಯಕೀಯ ಪ್ರತಿನಿಧಿಯೊಂದಿಗೆ ಸಭೆಯಲ್ಲಿದ್ದರು. ಸೋನಾಲಿ, ರೋಗಿಯ ಸಂಬಂಧಿಯಾಗಿದ್ದ ಗೋಕುಲ್ ಝಾಗೆ ಸ್ವಲ್ಪ ಸಮಯ ಕಾಯುವಂತೆ ಕೇಳಿಕೊಂಡಿದ್ದರು. ಇದರಿಂದ ಕುಪಿತನಾದ ಝಾ, ಸೋನಾಲಿಯ ಹೊಟ್ಟೆಗೆ ಒದ್ದು, ಕೂದಲನ್ನು ಹಿಡಿದೆಳೆದು, ಮುಖಕ್ಕೆ ಹೊಡೆದಿದ್ದಾನೆ.
ಈ ಕ್ರೂರ ದಾಳಿಯ ದೃಶ್ಯಗಳು ಕ್ಲಿನಿಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ವಿಡಿಯೋದಲ್ಲಿ, ಗೋಕುಲ್ ಝಾ ಕೋಪದಿಂದ ಸೋನಾಲಿಯ ಮೇಲೆ ದಾಳಿ ಮಾಡುವುದು ಸ್ಪಷ್ಟವಾಗಿ ಕಾಣಿಸುತ್ತದೆ. ದಾಳಿಯಿಂದ ಸೋನಾಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಅಲ್ಲಿದ್ದ ಇತರ ರೋಗಿಗಳ ಸಂಬಂಧಿಕರು ಮಧ್ಯಪ್ರವೇಶಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
कल्याणमध्ये मराठी रिसेप्शनिस्ट तरुणीला परप्रांतिय तरुणाकडून मारहाण, संतापजनक व्हिडिओ समोर #Kalyannews #Marathigirl pic.twitter.com/dRNKGEHmVc
— Maharashtra Times (@mataonline) July 22, 2025
ವಿಡಿಯೋ ವೈರಲ್ ಆದ ಬಳಿಕ, ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ಕ್ಲಿನಿಕ್‌ನ ಹೊರಗೆ ಪ್ರತಿಭಟನೆ ನಡೆಸಿದರು. ಸೋನಾಲಿಯ ದೂರಿನ ಆಧಾರದ ಮೇಲೆ, ಕಲ್ಯಾಣ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಜುಲೈ 22ರ ರಾತ್ರಿ ಆರೋಪಿ ಗೋಕುಲ್ ಝಾನನ್ನು ಬಂಧಿಸಲಾಗಿದೆ. ಝಾ ಜೊತೆಗೆ ಅವನ ಸಹೋದರ ಮತ್ತು ಇತರ ಇಬ್ಬರು ಮಹಿಳೆಯರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ಗೋಕುಲ್ ಝಾಗೆ ಕ್ರಿಮಿನಲ್ ಹಿನ್ನೆಲೆ ಇದ್ದು, ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜನರು ಒತ್ತಾಯಿಸಿದ್ದಾರೆ.
