ಕತ್ತಲಲ್ಲಿ ಕಾಮುಕನ ದೌರ್ಜನ್ಯ: ಯುವತಿಯ ಮೇಲೆ ಅಸಭ್ಯ ಸ್ಪರ್ಶ! ಸಿಸಿಟಿವಿ ದೃಶ್ಯ ವೈರಲ್

Film 2025 04 06t214017.895

ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತೊಮ್ಮೆ ಪ್ರಶ್ನಾರ್ಥಕವಾಗಿದೆ. ಸುದ್ದಗುಂಟೆಪಾಳ್ಯದಲ್ಲಿ  ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳ ಖಾಸಗಿ ಅಂಗವನ್ನು ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಈ ಕೃತ್ಯದ ಸಿಸಿಟಿವಿ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ಥಳೀಯ ನಿವಾಸಿಯ ದೂರಿನ ಮೇರೆಗೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಗುರುತು ಪತ್ತೆಗಾಗಿ ಏರಿಯಾದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಸಾಕ್ಷಿಗಳ ಹೇಳಿಕೆ ಸಂಗ್ರಹಿಸುತ್ತಿದ್ದಾರೆ. ಘಟನೆಯಿಂದ ಕೆರಳಿದ ಸ್ಥಳೀಯರು, ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಗಸ್ತು ಏರ್ಪಾಡು ಮಾಡುವಂತೆ ಒತ್ತಾಯಿಸಿದ್ದಾರೆ.

ಏರಿಯಾದ ನಿವಾಸಿ ಮುನಿರಾಜು ಮಾತನಾಡಿ, “ನಮ್ಮ ಪ್ರದೇಶದಲ್ಲಿ ಇಂತಹ ಘಟನೆ ಇದೇ ಮೊದಲು ಸಂಭವಿಸಿದೆ. ಇಲ್ಲಿ ಪಿಜಿಗಳು ಹೆಚ್ಚಾಗಿವೆ, ಹುಡುಗಿಯರು ರಾತ್ರಿ ವೇಳೆ ಓಡಾಡುತ್ತಾರೆ. ಆದರೆ ಈ ರೀತಿ ಆಗಬಾರದಿತ್ತು. ಪೊಲೀಸರು ಗಸ್ತು ಹೆಚ್ಚಿಸಿ, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ಬಿಟಿಎಂ ಲೇಔಟ್‌ನಲ್ಲಿ ಮಹಿಳಾ ಇನ್‌ಫ್ಲುಯೆನ್ಸರ್ ಒಬ್ಬರು ವ್ಲಾಗ್ ಮಾಡುವಾಗ ಬಾಲಕನೊಬ್ಬ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋದ ಘಟನೆ ನಡೆದಿತ್ತು. ಅಲ್ಲದೆ, ರಾಮಮೂರ್ತಿ ನಗರದಲ್ಲಿ ಬೈಕ್‌ನಲ್ಲಿ ಬಂದ ಕಾಮುಕನೊಬ್ಬ ಯುವತಿಗೆ ಅಸಭ್ಯವಾಗಿ ಸ್ಪರ್ಶಿಸಿದ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಆರೋಪಿ ಅರುಣ್ ಎಂಬಾತನನ್ನು ದೂರು ದಾಖಲಾದ ಎರಡು ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದರು.

 ಸುದ್ದಗುಂಟೆಪಾಳ್ಯ ಘಟನೆಯಲ್ಲಿ ಆರೋಪಿಯನ್ನು ಶೀಘ್ರ ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗಳ ಸರಣಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯರು ಪೊಲೀಸ್ ಗಸ್ತು ಮತ್ತು ಕಾನೂನು ಕ್ರಮಗಳನ್ನು ತೀವ್ರಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ.

Exit mobile version