ದೀಪಾವಳಿ ಹಬ್ಬ ಹತ್ತಿರ ಬಂತು ಅಂದರೆ ಪ್ರತಿ ಮನೆಯಲ್ಲೂ ಸ್ವಚ್ಛತಾ ಕಾರ್ಯ ಆರಂಭವಾಗುತ್ತದೆ. ಮನೆಯಲ್ಲಿರುವ ಪ್ರತಿ ಮೂಲೆ ಮೂಲೆಯನ್ನು ಕ್ಲೀನ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಕಡೆ ಮನೆ ಕ್ಲೀನ್ ಮಾಡು ಎಂದು ಮನೆಯ ಹೆಣ್ಣು ಮಗಳಿಗೆ ಹೇಳಿದ್ದಕ್ಕೆ ಆಕೆ ಕೋಪಗೊಂಡು ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಈ ಘಟನೆ ಉತ್ತರ ಪ್ರದೇಶ ಮಿರ್ಜಾಪುರದಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಘಟನೆಯ ಹಿನ್ನೆಲೆ
ದೀಪಾವಳಿ ಸಮೀಪಿಸುತ್ತಿದ್ದಂತೆ ಮನೆಯನ್ನು ಸ್ವಚ್ಛಗೊಳಿಸುವುದು ಪ್ರತಿ ಕುಟುಂಬದಲ್ಲಿ ಸಾಮಾನ್ಯ ಸಂಗತಿ. ಆದರೆ ಈ ಯುವತಿಯ ಕುಟುಂಬದಲ್ಲಿ, ತಾಯಿ ಮಗಳಿಗೆ ಮಾತ್ರ ಮನೆ ಕೆಲಸದ ಜವಾಬ್ದಾರಿ ನೀಡಿದ್ದಳು. ತನ್ನ ಸಹೋದರನ ಬದಲು ನನಗೇ ಏಕೆ ಈ ಕೆಲಸ ಎಂದು ಅಸಮಾಧಾನಗೊಂಡ ಯುವತಿ, ಕೋಪದಲ್ಲಿ ಮೊಬೈಲ್ ಟವರ್ ಮೇಲೆ ಹತ್ತಿ ಸಾವಿನ ಬೆದರಿಕೆ ಹಾಕಿದ್ದಾಳೆ.
ಸ್ಥಳೀಯರ ಪ್ರಕಾರ, ಯುವತಿ ಟವರ್ ಏರಿದ ಕೂಡಲೇ ಆತಂಕದ ವಾತಾವರಣ ನಿರ್ಮಾಣವಾಯಿತು. ಕುಟುಂಬ ಸದಸ್ಯರು ಮತ್ತು ಪಕ್ಕದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಮಿರ್ಜಾಪುರದ ಕಚ್ವಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಯುವತಿಗೆ ಸಲಹೆ ನೀಡಿ ಕೆಳಗಿಳಿಸಿದರು. ಪೊಲೀಸರು ಆಕೆಯನ್ನು ಸುರಕ್ಷಿತವಾಗಿ ಕುಟುಂಬಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಈ ಘಟನೆಯ ವೀಡಿಯೋವನ್ನು ಟ್ವಿಟರ್‌ನಲ್ಲಿ @gaurav1307kumar ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಅದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೋದಲ್ಲಿ ಯುವತಿ ಟವರ್ ಮೇಲೆ ನಿಂತು ಕೋಪವನ್ನು ವ್ಯಕ್ತಪಡಿಸುತ್ತಿರುವುದು ಕಾಣುತ್ತದೆ. ಮಿರ್ಜಾಪುರ ಪೊಲೀಸರು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಯುವತಿ ಸುರಕ್ಷಿತವಾಗಿದ್ದಾಳೆ ಮತ್ತು ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
