ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರು ಆರ್ಡರ್ ಮಾಡಿದ ಆಹಾರವನ್ನು ಪೂರ್ಣವಾಗಿ ತಿನ್ನಲು ಸಾಧ್ಯವಾಗದೇ ಹೋದಾಗ, ಉಳಿದ ಆಹಾರವನ್ನು ಪ್ಯಾಕ್ ಮಾಡಿ ನೀಡುವಂತೆ ಕೇಳುವುದು ಸಾಮಾನ್ಯ. ಹೆಚ್ಚಿನ ಹೊಟೇಲ್‌ಗಳು ಗ್ರಾಹಕರ ಮನವಿಗೆ ಸ್ಪಂದಿಸಿ, ಅವರು ತಿಂದುಳಿದ ಆಹಾರವನ್ನೇ ಪ್ಯಾಕ್ ಮಾಡಿ ನೀಡುತ್ತವೆ. ಆದರೆ ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದಿರುವ ಒಂದು ಘಟನೆ, ಹೊಟೇಲ್‌ಗಳ ಸ್ವಚ್ಛತೆ ಮತ್ತು ಆಹಾರ ಸುರಕ್ಷತೆ ಕುರಿತು ಭಾರೀ ಆತಂಕ ಹುಟ್ಟುಹಾಕಿದೆ.
ಮಲೇಷ್ಯಾದ ನೆಗೇರಿ ಸೆಂಬಿಲನ್ ರಾಜ್ಯದ ಸೆರೆಂಬನ್ ನಗರದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ, ಈಗಾಗಲೇ ಬೇಯಿಸಿ ಮಾರಾಟವಾಗದೇ ಉಳಿದ ಆಹಾರವನ್ನು ಮತ್ತೆ ತೊಳೆದು ಮರುಬಳಕೆ ಮಾಡಲು ಯತ್ನಿಸಲಾಗುತ್ತಿದೆ ಎಂಬುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ಬಹಿರಂಗವಾದ ಕೆಲವೇ ಗಂಟೆಗಳಲ್ಲಿ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕೊನೆಗೆ ಸಂಬಂಧಪಟ್ಟ ಅಧಿಕಾರಿಗಳು ಹೊಟೇಲ್‌ಗೆ ಬೀಗ ಹಾಕಿದ್ದಾರೆ.
ವೀಡಿಯೋದಲ್ಲಿ, ಹೊಟೇಲ್ ಸಿಬ್ಬಂದಿಯೊಬ್ಬರು ಉಳಿದ ಆಹಾರವನ್ನು ನೀರಿನಲ್ಲಿ ತೊಳೆಯುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಕೋಳಿ, ಮಟನ್ ಹಾಗೂ ಬೀನ್ ಕರ್ಡ್ ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ಬೇಸಿನ್‌ನಲ್ಲಿ ತೊಳೆದು, ನಂತರ ಮತ್ತೆ ಟ್ರೇಗಳಲ್ಲಿ ಇಡುವುದು ವೀಡಿಯೋದಲ್ಲಿ ದಾಖಲಾಗಿದೆ. ಈ ದೃಶ್ಯವನ್ನು ಗಮನಿಸಿದ ದಾರಿಹೋಕರೊಬ್ಬರು ತಕ್ಷಣ ವೀಡಿಯೋ ಚಿತ್ರೀಕರಿಸಿದ್ದು, ಆಹಾರವನ್ನು ಏಕೆ ತೊಳೆಯಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಮೊದಲು ಆ ಸಿಬ್ಬಂದಿ ಪ್ರಶ್ನೆಗೆ ಉತ್ತರಿಸಲು ಗೊಂದಲಗೊಂಡು ನಿರ್ಲಕ್ಷ್ಯ ತೋರಿಸಿದ್ದಾನೆ. ಆದರೆ ದಾರಿಹೋಕರು ಬಿಡದೇ ಕೇಳಿದಾಗ, ಉಳಿದ ಆಹಾರವನ್ನು ಮರುದಿನ ಮತ್ತೆ ಬೇಯಿಸಿ ಗ್ರಾಹಕರಿಗೆ ಬಡಿಸುವ ಉದ್ದೇಶವಿದೆ ಎಂದು ಸಿಬ್ಬಂದಿ ಒಪ್ಪಿಕೊಂಡಿದ್ದಾನೆ. ಈ ಸಂಭಾಷಣೆ ಸಹ ವೀಡಿಯೋದಲ್ಲಿ ದಾಖಲಾಗಿದೆ..
ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ಫೆಬ್ರವರಿ 3ರ ಮಧ್ಯರಾತ್ರಿಯ ನಂತರ ಈ ಘಟನೆ ನಡೆದಿದೆ. ವೀಡಿಯೋ ವೈರಲ್ ಆದ ತಕ್ಷಣವೇ ಸ್ಥಳೀಯರು ಆಹಾರ ಇಲಾಖೆಗೆ ದೂರು ನೀಡಿದ್ದು, ನೆಗೇರಿ ಸೆಂಬಿಲನ್ ಆರೋಗ್ಯ ಇಲಾಖೆ ಪ್ರಕರಣದ ಕುರಿತು ತ್ವರಿತ ತನಿಖೆ ಆರಂಭಿಸಿದೆ. ತನಿಖೆಯ ನಂತರ, ಮಲೇಷ್ಯಾದ ಆಹಾರ ಕಾಯ್ದೆ ಅಡಿಯಲ್ಲಿ ರೆಸ್ಟೋರೆಂಟ್ ಅನ್ನು 14 ದಿನಗಳ ಕಾಲ ಮುಚ್ಚುವಂತೆ ಆದೇಶಿಸಲಾಗಿದೆ.
ಅಷ್ಟೇ ಅಲ್ಲದೆ, ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಹೊಟೇಲ್ ಮಾಲೀಕರಿಗೆ RM 750 (ಸುಮಾರು ₹13,000) ದಂಡ ವಿಧಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಈ 14 ದಿನಗಳ ಅವಧಿಯಲ್ಲಿ ಮೂರನೇ ದಿನಕ್ಕೆ ಒಮ್ಮೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ವಚ್ಛತೆ ಮತ್ತು ಆಹಾರ ವ್ಯವಸ್ಥೆ ಸರಿಪಡಿಸಲಾಗಿದೆಯೇ ಎಂದು ಪರಿಶೀಲನೆ ನಡೆಸಲಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಮಾತನಾಡಿ, ಬೇಯಿಸಿದ ಉಳಿದ ಆಹಾರವನ್ನು ತೊಳೆದು ಮರುಬಳಕೆ ಮಾಡುವುದರಿಂದ ಗ್ರಾಹಕರು ಆಹಾರ ವಿಷಬಾಧೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಂತಹ ಕೃತ್ಯಗಳು ಕಾನೂನು ಬಾಹಿರವಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹಣಕ್ಕಾಗಿ ಮಾನವ ಆರೋಗ್ಯದೊಂದಿಗೆ ಆಟವಾಡುವುದು ಕ್ಷಮಾರ್ಹವಲ್ಲ” ಎಂದು ಅನೇಕರು ಕಿಡಿಕಾರಿದ್ದಾರೆ. ವೀಡಿಯೋ ಮಾಡಿದ ಪ್ರತ್ಯಕ್ಷದರ್ಶಿಯು ಕೂಡ, ಈ ಕೃತ್ಯವನ್ನು ಅಪಾಯಕಾರಿ ಮತ್ತು ಕಾನೂನು ವಿರೋಧಿ ಎಂದು ಹೇಳಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
