ಇನ್‌ಸ್ಟಾಗ್ರಾಂ ಫಾಲೋವರ್ಸ್ ಕುಸಿತಕ್ಕೆ ಮನನೊಂದು ಕಂಟೆಂಟ್ ಕ್ರಿಯೇಟರ್ ಯುವತಿ ಆತ್ಮಹತ್ಯೆ

Film 2025 05 01t115457.039

ಇತ್ತೀಚಿನ ದಿನಗಳಲ್ಲಿ, ಇನ್‌ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್‌ ಮೊದಲಾದ ಸಾಮಾಜಿಕ ಮಾಧ್ಯಮಗಳು ಯುವಜನರ ಜೀವನದ ಅವಿಭಾಜ್ಯ ಭಾಗವಾಗಿವೆ. ಲೈಕ್‌ಗಳು, ಫಾಲೋವರ್ಸ್‌ ಮತ್ತು ಕಾಮೆಂಟ್‌ಗಳು ಅವರ ಆತ್ಮವಿಶ್ವಾಸವನ್ನು ನಿರ್ಧರಿಸುವ ಮಾನದಂಡಗಳಾಗಿ ಮಾರ್ಪಟ್ಟಿವೆ. ಈ ಹೊಸ ತಲೆಮಾರಿಗೆ ಇದು ಸಾಧನೆಯ ಮಾಪಕವಾಗಿ ಪರಿಣಮಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೌದು, ಇನ್‌ಸ್ಟಾಗ್ರಾಂನಲ್ಲಿ (Instagram) ಫಾಲೋವರ್ಸ್ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಮಾನಸಿಕ ಖಿನ್ನತೆಗೊಳಗಾಗಿ, ಕಂಟೆಂಟ್ ಕ್ರಿಯೇಟರ್ (Content Creator) ಮಿಶಾ ಅಗರ್ವಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಿಶಾ ಅವರ ಸಹೋದರಿ ಇನ್‌ಸ್ಟಾಗ್ರಾಂನಲ್ಲಿ ಈ ದುಃಖದಾಯಕ ಘಟನೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಮಿಶಾ ತನ್ನ 25ನೇ ಹುಟ್ಟುಹಬ್ಬದ ಸಮೀಪದಲ್ಲಿದ್ದಾಗ, ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗಿರುವುದು ಆಕೆಯನ್ನು ತೀವ್ರ ಖಿನ್ನತೆಗೆ ಒಳಪಡಿಸಿತ್ತು. ಏಪ್ರಿಲ್ ತಿಂಗಳಿನಿಂದ ಆಕೆ ಒತ್ತಡದಲ್ಲಿದ್ದಳು. 1 ಮಿಲಿಯನ್ ಫಾಲೋವರ್ಸ್ ಗಳಿಸುವುದು ಆಕೆಯ ಕನಸಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತ ಕಂಡಿತ್ತು. ಈ ಬೇಸರದಿಂದಾಗಿಯೇ ಆಕೆ ಆತ್ಮಹತ್ಯೆಗೆ ಶರಣಾದಳು ಎಂದು ಸಹೋದರಿ ತಿಳಿಸಿದ್ದಾರೆ.

ಮಿಶಾ ಇನ್‌ಸ್ಟಾಗ್ರಾಂನಲ್ಲಿ ತನ್ನ ಭವಿಷ್ಯವನ್ನು ಕಂಡಿದ್ದಳು. ಆಕೆ ಅದರಲ್ಲಿ ತನ್ನದೇ ಒಂದು ಪ್ರಪಂಚವನ್ನು ರಚಿಸಿಕೊಂಡಿದ್ದಳು. ಆಗಾಗ ನನ್ನನ್ನು ತಬ್ಬಿಕೊಂಡು, ‘ನನ್ನ ಫಾಲೋವರ್ಸ್ ಕಡಿಮೆಯಾದರೆ ನಾನೇನು ಮಾಡಲಿ? ಅಲ್ಲಿಗೆ ನನ್ನ ವೃತ್ತಿಜೀವನವೇ ಮುಗಿಯುತ್ತದೆ’ ಎಂದು ಅಳುತ್ತಿದ್ದಳು.

ನಾನು ಹಲವು ಬಾರಿ ಆಕೆಗೆ, ‘ಇದು ನಿನ್ನ ಇಡೀ ಜೀವನವಲ್ಲ, ಕೇವಲ ಒಂದು ಹವ್ಯಾಸ. ಇದಿಲ್ಲದಿದ್ದರೆ ಜೀವನ ಮುಗಿಯುವುದಿಲ್ಲ’ ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ. ‘ನೀನು LLB ಮುಗಿಸಿದ್ದೀಯಾ, ನಿನ್ನ ಪ್ರತಿಭೆಯಿಂದ PCSJ ಪರೀಕ್ಷೆಗೆ ತಯಾರಿ ಮಾಡು, ಒಂದು ದಿನ ನ್ಯಾಯಾಧೀಶಳಾಗಬಹುದು’ ಎಂದು ವೃತ್ತಿಜೀವನದ ಆಯ್ಕೆಗಳನ್ನು ನೆನಪಿಸುತ್ತಿದ್ದೆ ಎಂದು ಸಹೋದರಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನ್ನು ಕೇವಲ ಮನರಂಜನೆಗಾಗಿ ಬಳಸು, ಅದು ನಿನ್ನನ್ನು ಒಡ್ಡಿಕೊಳ್ಳುವಂತೆ ಮಾಡಿಕೊಳ್ಳಬೇಡ ಎಂದು ಸಲಹೆ ನೀಡಿದ್ದೆ. ಆದರೆ, ಆಕೆ ಕೇಳಲಿಲ್ಲ. ತೀವ್ರ ಒತ್ತಡಕ್ಕೊಳಗಾಗಿ ತನ್ನ ಜೀವನವನ್ನೇ ಕೊನೆಗಾಣಿಸಿದಳು ಎಂದು ಸಹೋದರಿ ದುಃಖ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದ ದಾರಿಯಲ್ಲೇ ವೃತ್ತಿಜೀವನ ರೂಪಿಸಬೇಕೆಂಬ ಒತ್ತಡ, ಅಭಿಪ್ರಾಯಗಳ ತಕ್ಷಣದ ಪ್ರತಿಕ್ರಿಯೆಗೆ ಬಲಿಯಾಗುವುದು, ನಕಾರಾತ್ಮಕ ಟಿಪ್ಪಣಿಗಳು, ಇವೆಲ್ಲಾ ಒಟ್ಟಾಗಿ ಯುವಮನಸ್ಸನ್ನು ನರಳಿಸುತ್ತಿವೆ.

ಮನಃಶಾಂತಿ, ಆತ್ಮವಿಶ್ವಾಸ, ಹಾಗೂ ನಿಜವಾದ ಸಂಪರ್ಕಗಳು —ಇವುಗಳ ಕೊರತೆ ಬಹುಪಾಲು ಯುವಜನರ ಬದುಕಿನಲ್ಲಿ ಕಾಣಿಸುತ್ತಿದೆ. ಈ ಪೀಳಿಗೆಯು ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿದ್ದರೂ ಮಾನಸಿಕ ಸ್ಥೈರ್ಯದಲ್ಲಿ ಹಿನ್ನಡೆಯುತ್ತಿದೆ.

Exit mobile version