ಬೆಂಗಳೂರಿನ ರಸ್ತೆಯಲ್ಲಿ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಡಿಶಾ ಮೂಲದ ನೇಹಾ ಬಿಸ್ವಾಲ್ ಎಂಬ ಯುವತಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಪಿಜಿಯಲ್ಲಿ ವಾಸಿಸುತ್ತಿದ್ದಾಳೆ. ಮಳೆಯ ಸಂದರ್ಭದಲ್ಲಿ ಒಬ್ಬ ಚಾಲಕ ಕಾರನ್ನು ವೇಗವಾಗಿ ಚಾಲನೆ ಮಾಡಿದ್ದರಿಂದ ರಸ್ತೆಯಲ್ಲಿದ್ದ ನೀರು ಆಕೆಯ ಮೈಮೇಲೆ ಹಾರಿದೆ.
ಇದಕ್ಕೆ ಕೋಪಗೊಂಡ ನೇಹಾ, ಬೆಂಗಳೂರಿನ ಜನರ ಬಗ್ಗೆ ಅನುಚಿತವಾಗಿ ಮಾತನಾಡಿ, “ತಲೆಯಲ್ಲಿ ಬುದ್ಧಿಯಿಲ್ಲ, ಜೋರಾಗಿ ಮಳೆ ಬಂದರೂ ವಾಹನಗಳನ್ನು ವೇಗವಾಗಿ ಓಡಿಸುತ್ತಾರೆ, ಬೆಂಗಳೂರಿನವರು ಅನಕ್ಷರಸ್ಥರು” ಎಂದು ನಾಲಿಗೆ ಹರಿಬಿಟ್ಟಿದ್ದಾಳೆ. ಈ ಹೇಳಿಕೆಯಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಆದರೆ ಇದೀಗ ಆಕೆಯೇ ಮಳೆಯ ಸಮಯದಲ್ಲಿ ವೇಗವಾಗಿ ಬೈಕ್ ಚಾಲನೆ ಮಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಒಂದು ಕೈಯಲ್ಲಿ ಬೈಕ್ ಓಡಿಸುತ್ತಾ, ಮಳೆಯಲ್ಲಿ ಜಾಲಿಯಾಗಿ ರೈಡ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ವಿರುದ್ಧ ಕಾಮೆಂಟ್‌ಗಳನ್ನು ಹಾಕಿ ಟೀಕಿಸುತ್ತಿದ್ದಾರೆ. ಹಲವರು ಆಕೆಯಿಂದ ಕ್ಷಮೆಯಾಚನೆಯನ್ನು ಆಗ್ರಹಿಸಿದ್ದಾರೆ.
ನೇಹಾ ಬಿಸ್ವಾಲ್‌ರ ವಿಡಿಯೋಗಳಿಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಆಕೆಯ ಹೇಳಿಕೆಗಳು ಮತ್ತು ವರ್ತನೆಯನ್ನು ಖಂಡಿಸಿ, ಕನ್ನಡಿಗರ ಸಂಸ್ಕೃತಿಯನ್ನು ಅವಮಾನಿಸಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಘಟನೆಯಿಂದ ಬೆಂಗಳೂರಿನ ರಸ್ತೆ ಸುರಕ್ಷತೆ ಮತ್ತು ವಾಹನ ಚಾಲನೆಯ ಸಂಸ್ಕೃತಿಯ ಬಗ್ಗೆ ಚರ್ಚೆಗಳು ಆರಂಭವಾಗಿವೆ.