RCB ಗೆಲುವಿನ ಬಗ್ಗೆ ತೆಲುಗಿನಲ್ಲಿ ಪ್ರಶ್ನೆ ಕೇಳಿದ ಯುಟ್ಯೂಬ್‌ರ್‌ಗೆ, ಮೊದಲು ಕನ್ನಡದಲ್ಲಿ ಮಾತನಾಡಿ ಎಂದ ವಿಡಿಯೋ ವೈರಲ್

"ಮೊದಲು ಕನ್ನಡ!" ಬೆಂಗಳೂರು ಯುವತಿಯ ಧೈರ್ಯದ ಮಾತು ವೈರಲ್!

1 (12)

ಬೆಂಗಳೂರಿನ ರಸ್ತೆಯೊಂದರಲ್ಲಿ ನಡೆದ ಯೂಟ್ಯೂಬ್ ಸಂದರ್ಶನವೊಂದರಲ್ಲಿ, ತೆಲುಗಿನಲ್ಲಿ ಪ್ರಶ್ನೆ ಕೇಳಿದ ಸಂದರ್ಶಕನಿಗೆ, ಯುವತಿಯೊಬ್ಬರು ಕನ್ನಡದಲ್ಲಿ ಮಾತನಾಡಲು ಒತ್ತಾಯಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ಗೆಲುವಿನ ಬಗ್ಗೆ ತೆಲುಗಿನಲ್ಲಿ ಕೇಳಿದ ಪ್ರಶ್ನೆಗೆ, ಯುವತಿ, “ಮೊದಲು ಕನ್ನಡದಲ್ಲಿ ಮಾತಾಡಿ!” ಎಂದು ದೃಢವಾಗಿ ಉತ್ತರಿಸಿದ್ದಾರೆ. ಈ ಘಟನೆ ಕನ್ನಡಿಗರ ಭಾಷಾ ಜಾಗೃತಿಯನ್ನು ಎತ್ತಿ ತೋರಿಸಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.

ಬೆಂಗಳೂರಿನ ಒಂದು ರಸ್ತೆಯಲ್ಲಿ ಯೂಟ್ಯೂಬ್ ಚಾನೆಲ್‌ಗಾಗಿ ಸಂದರ್ಶನ ನಡೆಯುತ್ತಿತ್ತು. ಸಂದರ್ಶಕರು ತೆಲುಗಿನಲ್ಲಿ RCB ತಂಡದ ಐಪಿಎಲ್ ಪ್ರದರ್ಶನದ ಬಗ್ಗೆ ಯುವತಿಯೊಬ್ಬರಿಗೆ ಪ್ರಶ್ನೆ ಕೇಳಿದರು. ಆಗ ಆಕೆ, “ಮೊದಲು ಕನ್ನಡದಲ್ಲಿ ಮಾತಾಡಿ. ನೀವು ಕನ್ನಡದಲ್ಲಿಯೇ ಪ್ರಶ್ನೆ ಕೇಳಬೇಕು!” ಎಂದು ಒತ್ತಾಯಿಸಿದರು. ಸಂದರ್ಶಕರು, “ನನಗೆ ಸ್ವಲ್ಪ ಕನ್ನಡ ಬರುತ್ತದೆ,” ಎಂದು ವಿನಯದಿಂದ ಉತ್ತರಿಸಿದಾಗ, ಯುವತಿ, “ನಿಮಗೆ ಎಷ್ಟು ಕನ್ನಡ ಬರುತ್ತದೋ ಅಷ್ಟರಲ್ಲೇ ಮಾತಾಡಿ, ಅದು ಸಾಕು!” ಎಂದು ತಿರುಗೇಟು ನೀಡಿದರು. ಈ ಸಂಭಾಷಣೆಯ ವೀಡಿಯೊ ಎಕ್ಸ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ, ಕನ್ನಡಿಗರು ತಮ್ಮ ಭಾಷೆಯನ್ನು ಗೌರವಿಸುವಂತೆ ಒತ್ತಾಯಿಸುತ್ತಿದ್ದಾರೆ. ಇತ್ತೀಚಗೆ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್‌ನಿಂದ ಕನ್ನಡಕ್ಕೆ ಅವಮಾನಕರ ಹೇಳಿಕೆ, ಕಮಲ್ ಹಾಸನ್‌ರ ಕನ್ನಡ ವಿರೋಧಿ ಹೇಳಿಕೆಗಳಂತಹ ಘಟನೆಗಳು ಜನರಲ್ಲಿ ಆಕ್ರೋಶವನ್ನುಂಟು ಮಾಡಿವೆ. ಈಗ, ಕನ್ನಡಿಗರು ಹಿಂದಿ ಅಥವಾ ಇತರ ಭಾಷೆಗಳಿಗೆ ಬದಲಾಗಿ ಕನ್ನಡವನ್ನು ಬಳಸಲು ಒತ್ತಾಯಿಸುತ್ತಿದ್ದಾರೆ. ಈ ವೀಡಿಯೊ ಇಂತಹ ಒತ್ತಾಯದ ಒಂದು ಉದಾಹರಣೆಯಾಗಿದೆ.

ವೀಡಿಯೊ ವೈರಲ್ ಆಗುತ್ತಿದ್ದಂತೆ, ಜನರು ಎರಡೂ ದೃಷ್ಟಿಕೋನಗಳಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, “ಬೆಂಗಳೂರಿನಲ್ಲಿ ತೆಲುಗಿನಲ್ಲಿ ಪ್ರಶ್ನೆ ಕೇಳುವುದೇ? ಕನ್ನಡ ಸ್ಥಳೀಯ ಭಾಷೆ ಎಂಬುದು ಅವರಿಗೆ ತಿಳಿದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, “ಹಿಂದೆ ಜನರು ಇಂತಹ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಈಗ ಕನ್ನಡಿಗರು ತಮ್ಮ ಭಾಷೆಗಾಗಿ ಧ್ವನಿಯೆತ್ತುತ್ತಿರುವುದು ಸಂತೋಷದ ವಿಷಯ,” ಎಂದು ಶ್ಲಾಘಿಸಿದ್ದಾರೆ. ಇನ್ನೊಬ್ಬರು ಸಂದರ್ಶಕರ ವಿನಯದ ವರ್ತನೆಯನ್ನು ಮೆಚ್ಚಿ, “ತೆಲುಗು ಸಂದರ್ಶಕರು ಜಗಳವಾಡದೆ ವಿವೇಕದಿಂದ ಪ್ರತಿಕ್ರಿಯಿಸಿದ್ದು ಒಳ್ಳೆಯದು. ಅವರು ಯುವತಿಯ ಮಾತನ್ನು ಒಪ್ಪಿಕೊಂಡಿದ್ದಾರೆ,” ಎಂದು ಬರೆದಿದ್ದಾರೆ.

Exit mobile version