ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಬುಕ್ ಮಾಡಿ, ಆಟೋ ಚಾಲಕನ ಮೊಬೈಲ್ನಿಂದಲೇ ಪೊಲೀಸರಿಗೆ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ್ದ ಕಾರ್ತಿಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಈ ಹಿಂದೆಯೂ ಹಲವು ಬಾರಿ ಬೆದರಿಕೆ ಕರೆಗಳನ್ನು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಎಂ ನಿವಾಸದ ಬಳಿ ನಡೆದ ಈ ವಿಚಿತ್ರ ಘಟನೆಯಿಂದ ಕೆಲಕಾಲ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು. ಆದರೆ ತಕ್ಷಣ ಪೊಲೀಸರು ಪರಿಶೀಲನೆ ನಡೆಸಿದಾಗ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿತ್ತು.
ಆಟೋ ಬುಕ್ ಮಾಡಿ ಬೆದರಿಕೆ ಹಾಕಿದ್ದ ಕಾರ್ತಿಕ್!
ನವೆಂಬರ್ 5ರಂದು ಈ ಘಟನೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಭಗವಂತರಾಯನ್ ಎಂಬವರು ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಚಾಲನೆ ಮಾಡುತ್ತಿದ್ದರು. ಇದೇ ಆ್ಯಪ್ ಮೂಲಕ ಕಾರ್ತಿಕ್ ಎಂಬ ವ್ಯಕ್ತಿ ಸದಾಶಿವನಗರದಿಂದ ಆರ್.ಆರ್. ನಗರಕ್ಕೆ ತೆರಳಲು ಆಟೋ ಬುಕ್ ಮಾಡಿದ್ದ.
ಆ್ಯಪ್ನಲ್ಲಿ ಬಂದ ಪಿಕಪ್ ಲೊಕೇಶನ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಸಮೀಪ ತೋರಿಸಿತ್ತು. ಹೀಗಾಗಿ ನಿಗದಿತ ಸ್ಥಳಕ್ಕೆ ತೆರಳಿದ ಆಟೋ ಚಾಲಕ ಭಗವಂತರಾಯನ್, ಬುಕ್ಕಿಂಗ್ ಮಾಡಿದ್ದ ಕಾರ್ತಿಕ್ಗೆ ಕರೆ ಮಾಡಿ ತಾನು ಸಿಎಂ ನಿವಾಸದ ಬಳಿ ಬಂದಿರುವುದಾಗಿ ತಿಳಿಸಿದ್ದಾರೆ.
ಈ ವೇಳೆ ಕರೆ ಸ್ವೀಕರಿಸಿದ ಕಾರ್ತಿಕ್, ತಾನು ಸಿಎಂ ನಿವಾಸದ ಒಳಗಿರುವುದಾಗಿ ಹೇಳಿದ್ದಾನೆ. ಅಲ್ಲದೆ, ನಿವಾಸದ ಎದುರು ಬ್ಯಾರಿಕೇಡ್ ಹಾಕಿಕೊಂಡು ಪೊಲೀಸರು ನಿಂತಿದ್ದು, ಅವರಿಗೆ ಮೊಬೈಲ್ ಫೋನ್ ನೀಡುವಂತೆ ಆಟೋ ಚಾಲಕನಿಗೆ ಸೂಚಿಸಿದ್ದಾನೆ.
ಪೊಲೀಸರಿಗೇ ಬಾಂಬ್ ಸ್ಫೋಟದ ಬೆದರಿಕೆ!
ಅಪರಿಚಿತ ವ್ಯಕ್ತಿಯ ಮಾತಿನಂತೆ ಆಟೋ ಚಾಲಕ ಅಲ್ಲಿದ್ದ ಪೊಲೀಸರಿಗೆ ಮೊಬೈಲ್ ಫೋನ್ ನೀಡಿದ್ದಾರೆ. ಕರೆ ಸ್ವೀಕರಿಸಿದ ಪೊಲೀಸರೊಂದಿಗೆ ಮಾತನಾಡಿದ ಕಾರ್ತಿಕ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ.
ಅಷ್ಟೇ ಅಲ್ಲದೆ, ಮುಖ್ಯಮಂತ್ರಿಗಳ ಬೆಂಗಾವಲು ವಾಹನಗಳ ಸಂಚಾರದ ವೇಳೆ ಸ್ಫೋಟ ಸಂಭವಿಸಲಿದೆ ಎಂಬ ಸಂದೇಶವನ್ನೂ ನೀಡಿದ್ದಾನೆ. ಈ ರೀತಿ ಹೇಳಿಕೆ ನೀಡಿದ ಬೆನ್ನಲ್ಲೇ ಕರೆ ಕಡಿತಗೊಳಿಸಿದ್ದಾನೆ.
ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮೊದಲು ಆಟೋ ಚಾಲಕ ಭಗವಂತರಾಯನ್ ಅವರ ಆಟೋವನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮುಖ್ಯಮಂತ್ರಿ ನಿವಾಸದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಿ, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಪರಿಶೀಲನೆಯಲ್ಲಿ ಬಯಲಾಯ್ತು ಹುಸಿ ಬೆದರಿಕೆ
ಬಾಂಬ್ ಬೆದರಿಕೆ ಹಿನ್ನೆಲೆ ಪೊಲೀಸರು ತಕ್ಷಣವೇ ತಪಾಸಣೆ ನಡೆಸಿದರೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಮುಖ್ಯಮಂತ್ರಿ ನಿವಾಸ ಹಾಗೂ ವಿಧಾನಸೌಧಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಬೆದರಿಕೆ ಹುಸಿಯಾಗಿರುವುದು ಪರಿಶೀಲನೆಯ ಬಳಿಕ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕ ಭಗವಂತರಾಯನ್ ನೀಡಿದ ದೂರಿನ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಟೋ ಬುಕ್ ಮಾಡಿದ್ದ ಕಾರ್ತಿಕ್ ಯಾರು? ಯಾವ ಉದ್ದೇಶದಿಂದ ಮುಖ್ಯಮಂತ್ರಿಗಳ ನಿವಾಸ ಮತ್ತು ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಹಾಕಿದ್ದಾನೆ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.
ಆರೋಪಿ ಕಾರ್ತಿಕ್ ಬಂಧನ: ಮಾನಸಿಕ ಅಸ್ವಸ್ಥನಂತೆ ವರ್ತನೆ!
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಬುಕ್ ಮಾಡಿದ್ದ ಕಾರ್ತಿಕ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ ಎನ್ನಲಾಗಿದ್ದು, ಈ ಹಿಂದೆಯೂ ಹಲವು ಬಾರಿ ಇದೇ ರೀತಿಯ ಬೆದರಿಕೆ ಕರೆಗಳನ್ನು ಮಾಡಿರುವ ಮಾಹಿತಿ ಲಭ್ಯವಾಗಿದೆ.
ಕಾರ್ತಿಕ್ ತನ್ನ ಪೋಷಕರಿಂದ ದೂರವಾಗಿದ್ದು, ಮನೆಯಿಂದ ಹೊರಗುಳಿದಿದ್ದ ಎನ್ನಲಾಗಿದೆ. ಆತನ ಹಿನ್ನೆಲೆ ಹಾಗೂ ಈ ಹಿಂದಿನ ಬೆದರಿಕೆ ಕರೆಗಳ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
