ಶಾಸಕರು ದುಡ್ಡು ಕೊಟ್ಟು IPL ಟಿಕೆಟ್ ಖರೀದಿಸಲಿ: ಕೋಲಾರದಲ್ಲಿ ಯತ್ನಾಳ್ ಘರ್ಜನೆ

Untitled design (10)

ಕೋಲಾರ: ರಾಜ್ಯ ರಾಜಕಾರಣದ ಫೈರ್ ಬ್ರ್ಯಾಂಡ್ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಕೋಲಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಐಪಿಎಲ್ ಟಿಕೆಟ್ ಕೇಳುತ್ತಿರುವ ಜನಪ್ರತಿನಿಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ಗಂಭೀರ ಚರ್ಚೆಗಳ ಬದಲಿಗೆ ಕ್ರಿಕೆಟ್ ಪಂದ್ಯದ ವಿಐಪಿ ಟಿಕೆಟ್‌ಗಾಗಿ ಶಾಸಕರು ಪಟ್ಟು ಹಿಡಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಐಪಿಎಲ್ ಟಿಕೆಟ್ ವಿವಾದದ ಬಗ್ಗೆ ಮಾತನಾಡಿದ ಯತ್ನಾಳ್, ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ನಮ್ಮ ಶಾಸಕರು ಐಪಿಎಲ್ ಟಿಕೆಟ್‌ಗಾಗಿ ಚರ್ಚೆ ನಡೆಸುತ್ತಿರುವುದು ಅವರ ಮಾನಸಿಕತೆಯನ್ನು ಎತ್ತಿ ತೋರಿಸುತ್ತದೆ. ಜನಪ್ರತಿನಿಧಿಗಳ ಘನತೆಯನ್ನು ಇವರೇ ಹರಾಜು ಹಾಕುತ್ತಿದ್ದಾರೆ. ಪಂದ್ಯ ನೋಡುವ ಹಂಬಲವಿದ್ದರೆ ಸ್ವಂತ ಹಣ ಕೊಟ್ಟು ಟಿಕೆಟ್ ಖರೀದಿಸಲಿ, ಅದನ್ನು ಬಿಟ್ಟು ಪುಕ್ಸಟ್ಟೆ ಟಿಕೆಟ್‌ಗಾಗಿ ಭಿಕ್ಷೆ ಬೇಡುವುದು ಯಾಕೆ ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದ ಯತ್ನಾಳ್, ಕರ್ನಾಟಕದಲ್ಲಿ ಇಂದು ಪಾಕಿಸ್ತಾನ ಮಾದರಿಯ ಆಡಳಿತ ನಡೆಯುತ್ತಿದೆ. ಈ ಸರ್ಕಾರ ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮಗ್ನವಾಗಿದೆ. ಬಜೆಟ್‌ನಲ್ಲಿ ದಲಿತರಿಗೆ ಅಥವಾ ಕುರುಬ ಸಮುದಾಯಕ್ಕೆ ಯಾವುದೇ ನ್ಯಾಯ ಸಿಕ್ಕಿಲ್ಲ. ಸರ್ಕಾರ ಬರೀ ಒಂದು ಸಮುದಾಯದ ಪರವಾಗಿ ನಿಂತಿದೆ ಎಂದು ಆರೋಪಿಸಿದರು.

ಮುಂದುವರಿದು ಮಾತನಾಡಿದ ಅವರು, ರಂಜಾನ್ ವೇಳೆ ಎಲ್ಲಿಯೂ ಅಹಿತಕರ ಘಟನೆ ನಡೆಯುವುದಿಲ್ಲ. ಆದರೆ ರಾಮನವಮಿ ಅಥವಾ ಗಣೇಶ ಹಬ್ಬದ ವೇಳೆ ಯಾಕೆ ಕಲ್ಲು ತೂರಾಟ ನಡೆಯುತ್ತದೆ ? ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿಯನ್ನು ರದ್ದುಗೊಳಿಸಿ, ಅದನ್ನು ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಹಂಚಬೇಕು ಎಂದು ಒತ್ತಾಯಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಸ್ಫೋಟಕ ಹೇಳಿಕೆ ನೀಡಿದ ಯತ್ನಾಳ್, ಡಿಕೆಶಿ ಅವರು ಮುಖ್ಯಮಂತ್ರಿಯಾಗಲು ಹರಸಾಹಸ ಪಡುತ್ತಿದ್ದಾರೆ. ಇದಕ್ಕಾಗಿ ಅವರು ಬಿಜೆಪಿ ಶಾಸಕರನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ಆದರೆ ಮೋದಿ ಅವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದರು.

ತಮ್ಮನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನನ್ನನ್ನು ಬೆಳೆಸಿದ ತಾಯಿ ಇದ್ದಂತೆ. ಯಡಿಯೂರಪ್ಪ ಅವರ ಬಗ್ಗೆ ಈಗಲೇ ಏನನ್ನೂ ಹೇಳಲಾರೆ, ಆದರೆ ಪಕ್ಷದ ಶಿಸ್ತಿಗೆ ನಾನು ಬದ್ಧ ಎಂದರು. ಇದೇ ವೇಳೆ, ಮೇ ತಿಂಗಳಿನಲ್ಲಿ ಚಿತ್ರದುರ್ಗದಲ್ಲಿ ಬೃಹತ್ ಜಾಗೃತ ಹಿಂದೂ ಸಮಾಜೋತ್ಸವ’ ಹಮ್ಮಿಕೊಳ್ಳುತ್ತಿರುವುದಾಗಿ ಘೋಷಿಸಿದರು.

ಈ ವಾಗ್ದಾಳಿಯು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ನಾಂದಿ ಹಾಡಿದ್ದು, ಕಾಂಗ್ರೆಸ್ ನಾಯಕರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Exit mobile version