ನವದೆಹಲಿ: ಭಾರತದಲ್ಲಿ ಡಿಜಿಟಲ್ ವಹಿವಾಟಿನ ಕ್ಷೇತ್ರದಲ್ಲಿ ಯು.ಪಿ.ಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಒಂದು ಕ್ರಾಂತಿಕಾರಿ ವ್ಯವಸ್ಥೆಯಾಗಿದೆ. ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಈ ವೇದಿಕೆಯು ದಿನನಿತ್ಯದ ವಹಿವಾಟುಗಳನ್ನು ಸರಳಗೊಳಿಸಿದೆ. ಇದೀಗ, ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಯು.ಪಿ.ಐ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ತರಲು ಸಿದ್ಧವಾಗಿದೆ. ಈ ಹೊಸ ಯೋಜನೆಯು ಡಿಸೆಂಬರ್ 31, 2025 ರಿಂದ ಜಾರಿಗೆ ಬರಲಿದೆ.
ಈ ಹೊಸ ಬದಲಾವಣೆಯ ಪ್ರಕಾರ, ಯು.ಪಿ.ಐ ಬಳಕೆದಾರರು ತಮ್ಮ ಎಲ್ಲಾ ಪಾವತಿಗಳನ್ನು ಮತ್ತು ಆಟೋ ಪೇಮೆಂಟ್‌ಗಳನ್ನು ಒಂದೇ ಆ್ಯಪ್‌ನಿಂದ ನಿರ್ವಹಿಸಬಹುದು. ಫೋನ್‌ಪೇ, ಗೂಗಲ್‌ಪೇ, ಪೇಟಿಎಂ ಅಥವಾ ಇತರ ಯಾವುದೇ ಯು.ಪಿ.ಐ ಆ್ಯಪ್ ಬಳಸುತ್ತಿರಲಿ, ಇನ್ಮುಂದೆ ಎಲ್ಲಾ ವಹಿವಾಟುಗಳನ್ನು ಒಂದೇ ವೇದಿಕೆಯಲ್ಲಿ ನಿರ್ವಹಿಸಬಹುದು. ಇದರಿಂದ ಬಳಕೆದಾರರಿಗೆ ಬಹು ಆ್ಯಪ್‌ಗಳನ್ನು ಬಳಸುವ ತೊಂದರೆಯಿಂದ ಮುಕ್ತಿಯಾಗಲಿದೆ.
ಆಟೋ ಪೇಮೆಂಟ್‌ಗಳ ಸುಲಭ ವರ್ಗಾವಣೆ
ಈಗಾಗಲೇ ಯು.ಪಿ.ಐ ಬಳಕೆದಾರರು ವಿದ್ಯುತ್ ಬಿಲ್, ನೆಟ್‌ಫಿಕ್ಸ್, ಇಂಟರನೆಟ್ ಬಿಲ್, ಇ.ಎಂ.ಐ ಅಥವಾ ಇತರ ಆಟೋ ಪೇಮೆಂಟ್‌ಗಳನ್ನು ವಿವಿಧ ಆ್ಯಪ್‌ಗಳ ಮೂಲಕ ನಿರ್ವಹಿಸುತ್ತಿದ್ದಾರೆ. ಆದರೆ, ಈ ಆಟೋ ಪೇಮೆಂಟ್‌ಗಳನ್ನು ಒಂದು ಆ್ಯಪ್‌ನಿಂದ ಇನ್ನೊಂದಕ್ಕೆ ವರ್ಗಾಯಿಸುವುದು ಸವಾಲಾಗಿತ್ತು. ಈಗ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಡಿಸೆಂಬರ್ 31 ರಿಂದ, ಬಳಕೆದಾರರು ತಮ್ಮ ಆಟೋ ಪೇಮೆಂಟ್‌ಗಳನ್ನು ಒಂದು ಆ್ಯಪ್‌ನಿಂದ ಇನ್ನೊಂದಕ್ಕೆ ಸುಲಭವಾಗಿ ವರ್ಗಾಯಿಸಬಹುದು. ಉದಾಹರಣೆಗೆ, ನೀವು ಫೋನ್‌ಪೇನಲ್ಲಿ ನೆಟ್‌ಫಿಕ್ಸ್‌ಗೆ ಆಟೋ ಪೇಮೆಂಟ್ ಸೆಟ್ ಮಾಡಿದ್ದರೆ, ಇದನ್ನು ಗೂಗಲ್‌ಪೇಗೆ ತ್ವರಿತವಾಗಿ ವರ್ಗಾಯಿಸಬಹುದು.
ಬಳಕೆದಾರರಿಗೆ ಏನು ಪ್ರಯೋಜನ?
ಯು.ಪಿ.ಐ ಬಳಕೆದಾರರಿಗೆ ಹಲವು ಪ್ರಯೋಜನಗಳನ್ನು ತಂದುಕೊಡಲಿದೆ. ಮೊದಲನೆಯದಾಗಿ, ಒಂದೇ ಆ್ಯಪ್‌ನಿಂದ ಎಲ್ಲಾ ವಹಿವಾಟುಗಳನ್ನು ನಿರ್ವಹಿಸುವುದರಿಂದ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ಎರಡನೆಯದಾಗಿ, ಆಟೋ ಪೇಮೆಂಟ್‌ಗಳ ವರ್ಗಾವಣೆಯ ಸೌಲಭ್ಯವು ಬಳಕೆದಾರರಿಗೆ ತಮ್ಮ ಆರ್ಥಿಕ ವಹಿವಾಟುಗಳನ್ನು ಒಂದೇ ವೇದಿಕೆಯಲ್ಲಿ ಕೇಂದ್ರೀಕರಿಸಲು ಸಹಾಯ ಮಾಡಲಿದೆ. ಇದರಿಂದ ಬಿಲ್ ಪಾವತಿಗಳು, ಇ.ಎಂ.ಐ, ಮತ್ತು ಇತರ ಆಟೋ ಪೇಮೆಂಟ್‌ಗಳನ್ನು ಟ್ರ್ಯಾಕ್ ಮಾಡುವುದು ಸುಲಭವಾಗಲಿದೆ.