ಹಬ್ಬದ ದಿನಗಳಲ್ಲಿ ಅಥವಾ ಕುಟುಂಬದವರು, ಸ್ನೇಹಿತರು ಒಟ್ಟಿಗೆ ಸೇರಿದಾಗ ಎಲ್ಲರಿಗೂ ಒಂದೇ ಬಗೆಯ ಊಟ ಇಷ್ಟವಾಗುವುದಿಲ್ಲ. ಒಬ್ಬರಿಗೆ ಬಿರಿಯಾನಿ ಬೇಕಿದ್ದರೆ, ಮತ್ತೊಬ್ಬರಿಗೆ ಪಿಜ್ಜಾ ಇಷ್ಟವಾಗಬಹುದು. ಇಂತಹ ಸಮಯದಲ್ಲಿ ಎಲ್ಲರಿಗೂ ಬೇಕಾದ ಊಟವನ್ನು ಒದಗಿಸಲು ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ‘ಸ್ವಿಗ್ಗಿ’ ತನ್ನ ಆ್ಯಪ್‌ನಲ್ಲಿ ‘ಮಲ್ಟಿ-ರೆಸ್ಟೋರೆಂಟ್ ಆರ್ಡರಿಂಗ್’ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ.
ಈ ಹೊಸ ಸೌಲಭ್ಯದ ಮೂಲಕ ಗ್ರಾಹಕರು ಮನೆಯಲ್ಲೇ ಕುಳಿತು ‘ಫುಡ್ ಕೋರ್ಟ್’ ಮಾದರಿಯ ಅನುಭವವನ್ನು ಪಡೆಯಬಹುದು. ಈ ಫೀಚರ್ ಅಡಿಯಲ್ಲಿ ಗ್ರಾಹಕರು ಒಂದೇ ಬಾರಿಗೆ ಗರಿಷ್ಠ ಐದು ವಿಭಿನ್ನ ರೆಸ್ಟೋರೆಂಟ್‌ಗಳಿಂದ ತಮಗೆ ಇಷ್ಟವಾದ ಬೇರೆ ಬೇರೆ ತಿನಿಸುಗಳನ್ನು ಆರ್ಡರ್ ಮಾಡಬಹುದು.
ಬೇರೆ ಬೇರೆ ಹೋಟೆಲ್‌ಗಳಿಂದ ಊಟ ಆಯ್ಕೆ ಮಾಡಿದರೂ, ಪ್ರತ್ಯೇಕವಾಗಿ ಹಣ ಪಾವತಿಸುವ ಅಥವಾ ಪದೇ ಪದೇ ಓಟಿಪಿ ಹಾಕುವ ಅಗತ್ಯವಿಲ್ಲ. ಒಂದೇ ಚೆಕ್‌ಔಟ್‌ನಲ್ಲಿ ಬಿಲ್ ಪಾವತಿಸಬಹುದು.
ಪ್ರತ್ಯೇಕವಾಗಿ ಆರ್ಡರ್ ಮಾಡಿದಾಗ ಬೀಳುವ ಪ್ಲಾಟ್‌ಫಾರ್ಮ್ ಶುಲ್ಕಗಳನ್ನು ಪದೇ ಪದೇ ಪಾವತಿಸುವುದು ಇದರಿಂದ ತಪ್ಪುತ್ತದೆ. ಹೀಗಾಗಿ ಗ್ರಾಹಕರಿಗೆ ಹಣ ಉಳಿತಾಯವಾಗುತ್ತದೆ.
ಜೊತೆಗೆ ಬೇರೆ ಬೇರೆ ಹೋಟೆಲ್‌ಗಳಿಂದ ಆರ್ಡರ್ ತಯಾರಾಗಿ, ಪ್ರತ್ಯೇಕವಾಗಿ ಡೆಲಿವರಿ ಆದರೂ, ಆ್ಯಪ್‌ನ ಒಂದೇ ಸ್ಕ್ರೀನ್ ಮೇಲೆ ಆ ಎಲ್ಲಾ ಆರ್ಡರ್‌ಗಳನ್ನು ಒಟ್ಟಿಗೆ ಟ್ರ್ಯಾಕ್ ಮಾಡುವ ಸೌಲಭ್ಯ ನೀಡಲಾಗಿದೆ.
ಇದರ ಅಡಿಯಲ್ಲೇ ಆ್ಯಪ್‌ನಲ್ಲಿ ಬೇರೆ ಬೇರೆ ಕಾರ್ಟ್‌ಗಳನ್ನು ರಚಿಸಿ, ಅವುಗಳನ್ನು ಅಕ್ಕ-ಪಕ್ಕದಲ್ಲಿಟ್ಟು ಹೋಲಿಕೆ ಮಾಡಿ ನೋಡುವ ಆಯ್ಕೆಯೂ ಗ್ರಾಹಕರಿಗೆ ಸಿಗಲಿದೆ.
ಈ ಫೀಚರ್ ತಂದಿದ್ದು ಯಾಕೆ?
ಸ್ವಿಗ್ಗಿ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ, ಶೇ. 55ರಷ್ಟು ಬಳಕೆದಾರರು ಆ್ಯಪ್ ಬಳಸುವಾಗ ಎರಡು ಪ್ರತ್ಯೇಕ ಕಾರ್ಟ್‌ಗಳನ್ನು ಮಾಡಿಟ್ಟುಕೊಳ್ಳುತ್ತಾರೆ. ಹಾಗೆಯೇ, ಪ್ರತಿ 5 ಜನರಲ್ಲಿ ಒಬ್ಬರು ಮೊದಲ ಆರ್ಡರ್ ಮಾಡಿದ 30 ನಿಮಿಷಗಳಲ್ಲೇ ಮತ್ತೊಂದು ಆರ್ಡರ್ ಮಾಡುತ್ತಾರೆ. ಈ ರೀತಿ ಬೇರೆ ಬೇರೆ ಸಮಯದಲ್ಲಿ ಆರ್ಡರ್ ಮಾಡುವ ಕಿರಿಕಿರಿಯನ್ನು ತಪ್ಪಿಸಲು ಈ ಹೊಸ ಫೀಚರ್ ಅನ್ನು ತರಲಾಗಿದೆ.
ಈ ಕುರಿತು ಮಾತನಾಡಿರುವ ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಮುಖ್ಯಸ್ಥ ಸಿದ್ಧಾರ್ಥ್ ಭಾಕೂ, “ಯಾವುದೇ ಕಾರ್ಯಕ್ರಮದಲ್ಲಿ ಮೆನು ಆಯ್ಕೆ ಮಾಡುವುದೇ ಎಲ್ಲರಿಗೂ ಕಷ್ಟದ ಕೆಲಸ. ಆದ್ದರಿಂದ ನಾವು ಫುಡ್ ಕೋರ್ಟ್ ಪರಿಕಲ್ಪನೆಯನ್ನು ನೇರವಾಗಿ ಮನೆಗೆ ತರುತ್ತಿದ್ದೇವೆ. ಬಿರಿಯಾನಿ ಜೊತೆ ಪಿಜ್ಜಾ, ಅಥವಾ ಸ್ಥಳೀಯ ಸ್ಟ್ರೀಟ್ ಫುಡ್ ಜೊತೆ ಸಿಹಿ ತಿಂಡಿಯನ್ನು ಒಂದೇ ಚೆಕ್‌ಔಟ್ ಮೂಲಕ ಒಟ್ಟಿಗೆ ತರಿಸಿಕೊಳ್ಳುವ ಅವಕಾಶವನ್ನು ನೀಡುತ್ತಿದ್ದೇವೆ. ಊಟದ ವಿಚಾರದಲ್ಲಿ ಯಾರೂ ತಮ್ಮ ಇಷ್ಟವನ್ನು ಬಿಟ್ಟುಕೊಡಬಾರದು ಎಂಬುದೇ ನಮ್ಮ ಉದ್ದೇಶ,” ಎಂದಿದ್ದಾರೆ.
ಸದ್ಯ ಈ ಮಲ್ಟಿ-ರೆಸ್ಟೋರೆಂಟ್ ಆರ್ಡರಿಂಗ್ ಸೌಲಭ್ಯವು ದೇಶದ 720ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ.
