ಸೋಶಿಯಲ್ ಮೀಡಿಯಾ ಲೋಕದಲ್ಲಿ ಪ್ರತಿದಿನ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಅದರಲ್ಲೂ ಯುವಜನತೆಯನ್ನು ಸೆಳೆಯಲು ಪ್ರಮುಖ ಆ್ಯಪ್‌ಗಳು ಪರಸ್ಪರ ಪೈಪೋಟಿಗೆ ಇಳಿದಿವೆ. ಇದೀಗ ಮೆಟಾ ಸಂಸ್ಥೆಯ ಜನಪ್ರಿಯ ಸೋಶಿಯಲ್ ಮೀಡಿಯಾ ವೇದಿಕೆ ಇನ್ಸ್ಟಾಗ್ರಾಮ್ ತನ್ನ ಬಳಕೆದಾರರಿಗಾಗಿ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇನ್ಸ್ಟಾಗ್ರಾಮ್ ಇನ್ಸ್ಟೆಂಟ್ಸ್ (‘Instagram Instants’) ಎಂದು ಕರೆಯಲಾಗುತ್ತಿರುವ ಈ ಫೀಚರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಜೆನ್-Z ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಫೀಚರ್ ವಿನ್ಯಾಸಗೊಳಿಸಲಾಗಿದೆ ಎನ್ನಲಾಗುತ್ತಿದೆ. ಫೋಟೋಗಳನ್ನು ಕ್ಷಣಾರ್ಧದಲ್ಲಿ ಹಂಚಿಕೊಳ್ಳಲು ಹಾಗೂ ನೋಡಿದ ತಕ್ಷಣ ಅವು ಮಾಯವಾಗುವ ಅನುಭವ ನೀಡುವ ಮೂಲಕ, ಇದು ಸ್ನ್ಯಾಪ್ಚಾಟ್ (Snapchat)ಗೆ ನೇರ ಸ್ಪರ್ಧೆ ನೀಡುವ ಪ್ರಯತ್ನವೆಂದು ಟೆಕ್ ವಲಯದಲ್ಲಿ ಮಾತು ಕೇಳಿಬರುತ್ತಿದೆ.
ಫೋಟೋ ನೋಡಿದ ತಕ್ಷಣ ಡಿಲೀಟ್!
ಈ ಹೊಸ ಫೀಚರ್‌ನ ಪ್ರಮುಖ ಆಕರ್ಷಣೆ ಎಂದರೆ, ಬಳಕೆದಾರರು ಕಳುಹಿಸುವ ಫೋಟೋವನ್ನು ಬೇರೆಯವರು ಒಮ್ಮೆ ನೋಡಿದ ಬಳಿಕ ಅದು ಸ್ವಯಂ ಡಿಲೀಟ್ ಆಗುತ್ತದೆ. ಅಂದರೆ, ಫೋಟೋ ಇನ್‌ಬಾಕ್ಸ್‌ನಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಇದರಿಂದ ಖಾಸಗಿತನಕ್ಕೆ ಹೆಚ್ಚು ಮಹತ್ವ ಸಿಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸದ್ಯಕ್ಕೆ ಈ ಫೀಚರ್‌ನಲ್ಲಿ ಕೇವಲ ಫೋಟೋಗಳನ್ನು ಮಾತ್ರ ಶೇರ್ ಮಾಡಲು ಅವಕಾಶ ನೀಡಲಾಗಿದೆ. ವಿಡಿಯೋಗಳಿಗೆ ಇನ್ನೂ ಅವಕಾಶ ನೀಡಿಲ್ಲ. ಮತ್ತೊಂದು ವಿಶೇಷ ಅಂಶವೆಂದರೆ, ಫೋಟೋ ಕ್ಲಿಕ್ ಮಾಡಿದ ನಂತರ ಅತಿಯಾಗಿ ಎಡಿಟ್ ಮಾಡುವುದು ಅಥವಾ ಹಲವಾರು ಫಿಲ್ಟರ್‌ಗಳನ್ನು ಬಳಸುವುದು ಸಾಧ್ಯವಾಗುವುದಿಲ್ಲ. ನೈಸರ್ಗಿಕ ಹಾಗೂ ರಿಯಲ್ ಟೈಮ್ ಫೋಟೋಗಳನ್ನು ಹಂಚಿಕೊಳ್ಳುವ ಅನುಭವ ನೀಡುವುದೇ ಇದರ ಉದ್ದೇಶವಾಗಿದೆ.
‘Close Friends’ ಗೆ ಮಾತ್ರ ಸೀಕ್ರೆಟ್ ಶೇರಿಂಗ್
ಬಳಕೆದಾರರು ಕ್ಲಿಕ್ ಮಾಡುವ ಫೋಟೋಗಳನ್ನು ತಮ್ಮ ‘Best Friends’ ಅಥವಾ ‘Close Friends’ ಪಟ್ಟಿಯಲ್ಲಿರುವವರಿಗೆ ಮಾತ್ರ ಕಳುಹಿಸಬಹುದು. ಇದರಿಂದ ಖಾಸಗಿ ಕ್ಷಣಗಳನ್ನು ಆಯ್ದ ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳುವ ಅವಕಾಶ ಸಿಗುತ್ತದೆ.
ಫೋಟೋವನ್ನು ಅವರು ನೋಡಿದ ಬಳಿಕ ಅದು ಇನ್‌ಬಾಕ್ಸ್‌ನಿಂದ ಮಾಯವಾಗುತ್ತದೆ. ಆದರೆ, ಭವಿಷ್ಯದಲ್ಲಿ ರಿಕ್ಯಾಪ್ ಮಾಡಲು ಫೋಟೋಗಳು ಬ್ಯಾಕ್‌ಎಂಡ್ ಆರ್ಕೈವ್‌ನಲ್ಲಿ ಒಂದು ವರ್ಷದವರೆಗೆ ಸುರಕ್ಷಿತವಾಗಿ ಉಳಿಯುತ್ತವೆ.
ತಪ್ಪಾಗಿ ಕಳಿಸಿದರೆ ‘Undo’ ಸೌಲಭ್ಯ
ಬಹುತೇಕ ಬಳಕೆದಾರರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ತಪ್ಪು ವ್ಯಕ್ತಿಗೆ ಫೋಟೋ ಕಳಿಸುವುದು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಮೆಟಾ ‘Undo’ ಎಂಬ ವಿಶೇಷ ಆಯ್ಕೆಯನ್ನು ಸೇರಿಸಿದೆ. ಫೋಟೋ ತಪ್ಪಾಗಿ ಯಾರಿಗಾದರೂ ಹೋಗುವ ಮೊದಲು ಅದನ್ನು ಹಿಂಪಡೆಯಲು ಈ ಆಯ್ಕೆ ಸಹಾಯ ಮಾಡುತ್ತದೆ.
ಇದರ ಜೊತೆಗೆ, ಈ ಸೀಕ್ರೆಟ್ ಫೋಟೋ ಶೇರಿಂಗ್ ಅನುಭವವನ್ನು ಇನ್ನಷ್ಟು ಸುಲಭಗೊಳಿಸಲು ಪ್ರತ್ಯೇಕ ಇನ್‌ಸ್ಟೆಂಟ್ಸ್ ಆ್ಯಪ್‌ವನ್ನೂ ಪರಿಚಯಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವರ್ಷದ ಕೊನೆಯಲ್ಲಿ ‘Recap’ ಸೌಲಭ್ಯ
ಈ ಫೀಚರ್‌ನ ಮತ್ತೊಂದು ವಿಶೇಷತೆ ಎಂದರೆ ‘Instants Recap’. ಬಳಕೆದಾರರು ವರ್ಷಪೂರ್ತಿ ಹಂಚಿಕೊಂಡಿರುವ ಫೋಟೋಗಳನ್ನು ಒಟ್ಟಿಗೆ ಸೇರಿಸಿ ಒಂದು ವಿಶೇಷ ರಿಕ್ಯಾಪ್ ರೂಪದಲ್ಲಿ ನೋಡಬಹುದು. ಅದನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಾಗಿ ಹಂಚಿಕೊಳ್ಳುವ ಅವಕಾಶವೂ ಸಿಗಲಿದೆ.
ಇದರಿಂದ ಹಳೆಯ ನೆನಪುಗಳನ್ನು ಮತ್ತೆ ನೋಡಿಕೊಳ್ಳಲು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸುಲಭವಾಗಲಿದೆ.
ಫೀಚರ್ ಬಳಸೋದು ಹೇಗೆ?
Instagram ಇನ್‌ಬಾಕ್ಸ್ ತೆರೆಯುವ ಬಳಿಕ ಕೆಳಭಾಗದಲ್ಲಿರುವ ‘+’ ಚಿಹ್ನೆಯನ್ನು ಒತ್ತಿದರೆ ಕ್ಯಾಮೆರಾ ತೆರೆಯುತ್ತದೆ. ಅಲ್ಲಿಯೇ ಫೋಟೋ ಕ್ಲಿಕ್ ಮಾಡಿ ನೇರವಾಗಿ ಸ್ನೇಹಿತರಿಗೆ ಕಳುಹಿಸಬಹುದು.
ರಿಕ್ಯಾಪ್ ನೋಡಲು ಕ್ಯಾಮೆರಾ ಓಪನ್ ಆದ ನಂತರ ಮೇಲ್ಭಾಗದಲ್ಲಿರುವ ನಾಲ್ಕು ಚೌಕಗಳ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ಹಳೆಯ ಫೋಟೋಗಳ ಪಟ್ಟಿ ಕಾಣುತ್ತದೆ. ಅಲ್ಲಿಂದ ‘Create Recap’ ಆಯ್ಕೆ ಮಾಡಿ ಸ್ಟೋರಿಗೆ ಹಂಚಿಕೊಳ್ಳಬಹುದು.
ಈ ಫೀಚರ್ ಬೇಡ ಅಂದ್ರೆ ಆಫ್ ಮಾಡಬಹುದು!
ಕೆಲವರಿಗೆ ಇಂತಹ ತಾತ್ಕಾಲಿಕ ಫೋಟೋ ಫೀಚರ್ ಇಷ್ಟವಾಗದೇ ಇರಬಹುದು. ಅಂತಹ ಬಳಕೆದಾರರಿಗಾಗಿ Instagram ಈ ಫೀಚರ್ ಅನ್ನು ಸಂಪೂರ್ಣವಾಗಿ ಹೈಡ್ ಮಾಡುವ ಅವಕಾಶವನ್ನೂ ನೀಡಿದೆ.
ಪ್ರೊಫೈಲ್‌ನ ‘Settings and Activity’ ವಿಭಾಗಕ್ಕೆ ಹೋಗಿ, ‘Content Preferences’ ಒಳಗಿನ ‘Hide Instants in Inbox’ ಆಯ್ಕೆಯನ್ನು ಆನ್ ಮಾಡಿದರೆ ಸಾಕು. ನಂತರ ಈ ಫೀಚರ್ ಇನ್‌ಬಾಕ್ಸ್‌ನಲ್ಲಿ ಕಾಣಿಸುವುದಿಲ್ಲ..
