ಬೀಜಿಂಗ್: ಭಾರತ ಸೇರಿದಂತೆ ಹಲವು ದೇಶಗಳು 5ಜಿ ನೆಟ್‌ವರ್ಕ್ ಪರಿಚಯಿಸುತ್ತಿರುವಾಗ, ಚೀನಾ ಈಗ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಜಾರಿಗೆ ತಂದಿದೆ.
ಚೀನಾ ಮತ್ತು ಹುವಾಯ್ ಯುನಿಕಾರ್ನ್ ಸಹಭಾಗಿತ್ವದಲ್ಲಿ ಈ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಚೀನಾದ ಹೆಬೈ ಪ್ರಾಂತ್ಯದ ಸುನನ್ ಕೌಂಟಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ಭಾರತ ಮತ್ತು ಇತರ ದೇಶಗಳು 100 ಎಂಬಿಪಿಎಸ್ ವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಚೀನಾದ ಕಂಪನಿಗಳು 10 ಪಟ್ಟು ಹೆಚ್ಚಿನ ವೇಗವಿರುವ ಈ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಿವೆ. ಇದರಲ್ಲಿ 2 ಗಂಟೆಗಳ ಚಲನಚಿತ್ರವನ್ನು ಕೇವಲ 1 ನಿಮಿಷದಲ್ಲಿ ಡೌನ್‌ಲೋಡ್ ಮಾಡಬಹುದು.
ಹೆಬೈ ಪ್ರಾಂತ್ಯದಲ್ಲಿ ಪರಿಚಯಿಸಲಾದ ವಿಶ್ವದ ಮೊದಲ 50ಜಿ ಪಿಒಎನ್ ಸೊಲ್ಯೂಷನ್ಸ್ ಅಡಿಯಲ್ಲಿ ರಚಿತವಾದ ಈ ಬ್ರಾಡ್‌ಬ್ಯಾಂಡ್ ಮೂಲಸೌಕರ್ಯವು 9,834 ಎಂಬಿಪಿಎಸ್ ಡೌನ್‌ಲೋಡ್ ವೇಗ ಮತ್ತು 1,008 ಎಂಬಿಪಿಎಸ್ ಅಪ್‌ಲೋಡ್ ವೇಗವನ್ನು ಹೊಂದಿದೆ.
ಇದಲ್ಲದೆ, 900 ಜಿಬಿ ಗಾತ್ರದ ಭಾರೀ ಫೈಲ್‌ಗಳನ್ನು ಕೆಲವೇ ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು. ಫೈಬರ್ ಆಪ್ಟಿಕ್ ಆರ್ಕಿಟೆಕ್ಚರ್ ಅನ್ನು ಅಪ್‌ಗ್ರೇಡ್ ಮಾಡುವ ಮೂಲಕ ಒಬ್ಬ ಬಳಕೆದಾರನ ಬ್ಯಾಂಡ್‌ವಿಡ್ತ್ ಅನ್ನು ಸಾಂಪ್ರದಾಯಿಕ ಗಿಗಾಬೈಟ್‌ನಿಂದ 10 ಪಟ್ಟು ಹೆಚ್ಚಿನ ಮಟ್ಟಕ್ಕೆ ಏರಿಸಲಾಗಿದೆ ಎಂದು ವರದಿಯಾಗಿದೆ.
ಈ ಬ್ರಾಡ್‌ಬ್ಯಾಂಡ್ ವೇಗವರ್ಧನೆಯು ಭವಿಷ್ಯದಲ್ಲಿ 8ಕೆ ವೀಡಿಯೋ ಸ್ಟ್ರೀಮಿಂಗ್, ಅಡ್ವಾನ್ಸ್ಡ್ ಕ್ಲೌಡ್ ಕಂಪ್ಯೂಟಿಂಗ್, ಮತ್ತು ಉನ್ನತ ಮಟ್ಟದ ವರ್ಚುವಲ್ ರಿಯಾಲಿಟಿ ಅನುಭವಗಳಿಗೆ ಪೂರಕವಾಗಲಿದೆ ಎಂದು ತಿಳಿದುಬಂದಿದೆ.
