ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್

Untitled design (42)

ನವದೆಹಲಿ: ಸರ್ಕಾರಿ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ಹಲವಾರು ದಿನಗಳಿಂದ 4G ಮತ್ತು 5G ಸೇವೆಗಾಗಿ ಕಾಯುತ್ತಿರುವ ಕೋಟ್ಯಂತರ ಬಳಕೆದಾರರಿಗೆ, ಇದೀಗ ಗುಡ್‌ನ್ಯೂಸ್ ಕೊಟ್ಟಿದೆ. 4G ಮತ್ತು 5G ಸೇವೆಗಳ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. ದೇಶದ ಎಲ್ಲಾ ಭಾಗಗಳಲ್ಲಿ 4G ಟವರ್‌ಗಳ ಅಳವಡಿಕೆ ಪ್ರಕ್ರಿಯೆ ತ್ವರಿತಗೊಳ್ಳುತ್ತಿದೆ ಮತ್ತು ಸರ್ಕಾರ ತನ್ನ ಗುರಿಯತ್ತ ವೇಗವಾಗಿ ಸಾಗುತ್ತಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮುಖ್ಯ ಮಾಹಿತಿ ಹಂಚಿಕೊಂಡಿದ್ದಾರೆ. 2024ರ ದೀಪಾವಳಿ ವೇಳೆಗೆ 4G ಸೇವೆ ಆರಂಭಿಸುವ ಗುರಿ ಇತ್ತು. ಆದರೆ ಕೆಲ ತಾಂತ್ರಿಕ ಮತ್ತು ಕಾರ್ಯನಿರ್ವಹಣಾ ಅಡಚಣೆಗಳಿಂದಾಗಿ ಯೋಜನೆಯು ಮುಂದೂಡಲಾಗಿತ್ತು. ಇದೀಗ ಜೂನ್ ಅಥವಾ ಜುಲೈ ತಿಂಗಳೊಳಗೆ 4G ಸೇವೆ ಪ್ರಾರಂಭವಾಗಲಿದೆ ಎಂದು ಬಿಎಸ್‌ಎನ್‌ಎಲ್ ಘೋಷಿಸಿದೆ.

ಜ್ಯೋತಿರಾದಿತ್ಯ ಸಿಂಧಿಯಾ ಅವರು ನೀಡಿದ ಮಾಹಿತಿ ಪ್ರಕಾರ, ಈಗಾಗಲೇ 90 ಸಾವಿರ ಟವರ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಈ ಪೈಕಿ 70 ಸಾವಿರಕ್ಕೂ ಹೆಚ್ಚು ಟವರ್‌ಗಳಿಗೆ ಹಸಿರು ನಿಶಾನೆ (ಆಪರೇಷನಲ್ ಸ್ಥಿತಿ) ದೊರಕಿದೆ. ಜುಲೈ ಅಂತ್ಯದ ವೇಳೆಗೆ 1 ಲಕ್ಷ 4G ಟವರ್‌ಗಳ ಅಳವಡಿಕೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 1 ಲಕ್ಷ ಟವರ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ಬಳಿಕ ಎರಡನೇ ಹಂತದಲ್ಲಿ ಈ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು.

5G ಸೇವೆಗಳ ಕುರಿತು ಮಾತನಾಡಿದ ಸಚಿವರು, ಸ್ಥಾಪಿತವಾಗುತ್ತಿರುವ 1 ಲಕ್ಷ 4G ಟವರ್‌ಗಳನ್ನು ಶೀಘ್ರದಲ್ಲೇ ಕಾರ್ಯಾರಂಭಗೊಳಿಸಲಾಗುವುದು. ಈ ಟವರ್‌ಗಳ ಬಳಸಿ 4G ನೆಟ್‌ವರ್ಕ್ ಅನ್ನು ಬದಲಾಯಿಸಿ 5G ಗೆ ಸುಗಮವಾಗಿ ವರ್ಗಾವಣೆ ಮಾಡುವ ವ್ಯವಸ್ಥೆ ಸಿದ್ಧವಾಗಿದೆ. ಭಾರತವು ತನ್ನದೇ ಆದ 4G ಮತ್ತು 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಎರಡು-ಮೂರು ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಈ ತಂತ್ರಜ್ಞಾನಕ್ಕಾಗಿ ಭಾರತ ಸ್ವದೇಶಿ ಕೋರ್ ನೆಟ್‌ವರ್ಕ್ ಮತ್ತು ಆರ್‌ಎಎನ್ (ರೇಡಿಯೋ ಆಕ್ಸೆಸ್ ನೆಟ್‌ವರ್ಕ್) ವ್ಯವಸ್ಥೆಗಳನ್ನು ರೂಪಿಸಿದೆ.

ಇದೇ ಸಂದರ್ಭದಲ್ಲಿ, ಬಿಎಸ್‌ಎನ್‌ಎಲ್ ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆದಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಬಿಡುಗಡೆ ಮಾಡಿದ ಇತ್ತೀಚಿನ ವರದಿ ಪ್ರಕಾರ, 2024ರ ಜನವರಿಯಲ್ಲಿ ಬಿಎಸ್‌ಎನ್‌ಎಲ್ 1.5 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಕಳೆದುಕೊಂಡಿದೆ.

ಇತರ ಕಂಪನಿಗಳ ಸ್ಥಿತಿಗತಿಯನ್ನೂ ಗಮನಿಸಿದರೆ, ಏರ್‌ಟೆಲ್ ಜನವರಿಯಲ್ಲಿ 16.5 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದ್ದು ಮುಂಚೂಣಿಯಲ್ಲಿದೆ. ಜಿಯೋ 6.86 ಲಕ್ಷ ಹೊಸ ಗ್ರಾಹಕರನ್ನು ಗಳಿಸಿದೆ. ಆದರೆ ವೊಡಾಫೋನ್-ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಎರಡೂ ತಮ್ಮ ಗ್ರಾಹಕರನ್ನು ಕಳೆದುಕೊಂಡಿವೆ. ವೊಡಾಫೋನ್-ಐಡಿಯಾ 13.4 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದ್ದು, ಬಿಎಸ್‌ಎನ್‌ಎಲ್ ತನ್ನ 1.52 ಲಕ್ಷ ಗ್ರಾಹಕರ ನಂಬಿಕೆಯನ್ನು ಕಳೆದುಕೊಂಡಿದೆ.

ಈ ಹಿನ್ನಲೆಯಲ್ಲಿ ಬಿಎಸ್‌ಎನ್‌ಎಲ್ ತನ್ನ 4G ಮತ್ತು 5G ಸೇವೆಗಳ ವೇಗವರ್ಧನೆಯ ಮೂಲಕ ಮತ್ತೊಮ್ಮೆ ತನ್ನ ಹಳೆಯ ಗ್ಲಾಮರ್ ಹಿನ್ನಡೆಯನ್ನು ಮರಳಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ. ಮುಂಬರುವ ತಿಂಗಳಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಸುಧಾರಿತ ಗುಣಮಟ್ಟದ ಇಂಟರ್‌ನೆಟ್ ಸೇವೆ ದೊರೆಯಲಿದೆ ಎಂಬ ಭರವಸೆ ನೀಡಲಾಗಿದೆ.

Exit mobile version