ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ದಾಖಲೆ ಬರೆದಿದ್ದಾರೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 587 ರನ್‌ಗಳನ್ನು ಕಲೆಹಾಕಿದ್ದು, ಇಂಗ್ಲೆಂಡ್ 407 ರನ್‌ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 115 ರನ್‌ಗಳ (ಮೊದಲ ಇನಿಂಗ್ಸ್‌ನಲ್ಲಿ 87, ದ್ವಿತೀಯ ಇನಿಂಗ್ಸ್‌ನಲ್ಲಿ 28) ಕೊಡುಗೆಯೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್‌ಗಳ ಮೈಲಿಗಲ್ಲನ್ನು ಕೇವಲ 21 ಟೆಸ್ಟ್ ಪಂದ್ಯಗಳಲ್ಲಿ ತಲುಪಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಮತ್ತು ವಿರೇಂದ್ರ ಸೆಹ್ವಾಗ್‌ರ ದಾಖಲೆಯನ್ನು ಮುರಿದಿದ್ದಾರೆ.
ಯಶಸ್ವಿ ಜೈಸ್ವಾಲ್ ತಮ್ಮ 21 ಟೆಸ್ಟ್ ಪಂದ್ಯಗಳಲ್ಲಿ 40 ಇನಿಂಗ್ಸ್‌ಗಳನ್ನು ಆಡಿ 2000 ರನ್‌ಗಳನ್ನು ಪೂರೈಸಿದ್ದಾರೆ. ಇದಕ್ಕೂ ಮುಂಚೆ, ರಾಹುಲ್ ದ್ರಾವಿಡ್ ಮತ್ತು ವಿರೇಂದ್ರ ಸೆಹ್ವಾಗ್ 25 ಟೆಸ್ಟ್ ಪಂದ್ಯಗಳಲ್ಲಿ 40 ಇನಿಂಗ್ಸ್‌ಗಳ ಮೂಲಕ 2000 ರನ್‌ಗಳ ಗಡಿ ದಾಟಿದ್ದರು. ಆದರೆ, ಯಶಸ್ವಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು, ಭಾರತದ ಪರ ಅತೀ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ 2000 ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.