ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಡ್ರಾ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯ ಹಿಂದೆ ಯುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್‌ರ ಚೊಚ್ಚಲ ಅಜೇಯ ಶತಕ ಮತ್ತು ರವೀಂದ್ರ ಜಡೇಜಾರೊಂದಿಗಿನ 200 ಕ್ಕೂ ಹೆಚ್ಚು ರನ್‌ಗಳ ಅಜೇಯ ಜೊತೆಯಾಟವು ಪ್ರಮುಖ ಕಾರಣವಾಗಿದೆ.
ಹೌದು, ಭಾರತ ತಂಡವು ಸೋಲಿನ ಸುಳಿಯಲ್ಲಿದ್ದಾಗ, ವಾಷಿಂಗ್ಟನ್ ಸುಂದರ್ ತಮ್ಮ ಬೌಲಿಂಗ್ ಕೌಶಲ್ಯದ ಜೊತೆಗೆ ಬ್ಯಾಟಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ರಕ್ಷಿಸಿದರು. ಗಾಯಗೊಂಡ ರಿಷಭ್ ಪಂತ್ ಬದಲಿಗೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸುಂದರ್, ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಸ್ಮರಣೀಯ ಇನ್ನಿಂಗ್ಸ್ ಆಡಿದರು.
ತಂಡವು 188 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿರುವಾಗ ಸುಂದರ್ ಬ್ಯಾಟಿಂಗ್‌ಗೆ ಬಂದರು. ನಾಯಕ ಶುಭ್‌ಮನ್ ಗಿಲ್ ಜೊತೆಗೆ 34 ರನ್‌ಗಳ ಜೊತೆಯಾಟ ಕಟ್ಟಿದರೂ, ಗಿಲ್ ವಿಕೆಟ್ ಪತನದಿಂದ ಈ ಜೊತೆಯಾಟ ಮುರಿದುಬಿತ್ತು. ಆಗ ರವೀಂದ್ರ ಜಡೇಜಾರೊಂದಿಗೆ ಸುಂದರ್ 334 ಎಸೆತಗಳಲ್ಲಿ 203 ರನ್‌ಗಳ ಅಜೇಯ ಜೊತೆಯಾಟವನ್ನು ಕಟ್ಟಿದರು. ಈ ಇನ್ನಿಂಗ್ಸ್‌ನಲ್ಲಿ ಸುಂದರ್ 206 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಅಜೇಯ 101 ರನ್‌ಗಳನ್ನು ಗಳಿಸಿದರು.
2021 ರಲ್ಲಿ ಟೆಸ್ಟ್ ವೃತ್ತಿಜೀವನ ಆರಂಭಿಸಿದ ಸುಂದರ್, ತಮ್ಮ ಮೊದಲ ಅಂತರರಾಷ್ಟ್ರೀಯ ಶತಕಕ್ಕಾಗಿ 4 ವರ್ಷ ಕಾದಿದ್ದರು. ಈ ಶತಕವು ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ. ಜಡೇಜಾ ಜೊತೆಗಿನ ಈ ಜೊತೆಯಾಟವು ಎರಡು ಸೆಷನ್‌ಗಳಿಗಿಂತಲೂ ಹೆಚ್ಚು ಕಾಲ ನಡೆಯಿತು. ಸುಂದರ್ ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ 26ನೇ ಭಾರತೀಯ ಆಟಗಾರ ಮತ್ತು ಟೆಸ್ಟ್‌ನಲ್ಲಿ ಶತಕ ಬಾರಿಸಿದ ಭಾರತದ 70ನೇ ಆಟಗಾರ ಎನಿಸಿಕೊಂಡರು.