ಆರ್‌ಸಿಬಿ ಸ್ಟಾರ್ ಯಶ್ ದಯಾಳ್‌ಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪ, ಪೊಲೀಸ್ ನೋಟಿಸ್!

Web 2025 06 29t194919.055
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವೇಗದ ಬೌಲರ್ ಯಶ್ ದಯಾಳ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮಹಿಳೆಯೊಬ್ಬರು ಯಶ್ ದಯಾಳ್ ತಮ್ಮನ್ನು ಮದುವೆಯ ಆಮಿಷದೊಡ್ಡಿ ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ಗಾಜಿಯಾಬಾದ್ ಪೊಲೀಸರು ತನಿಖೆ ಆರಂಭಿಸಿದ್ದು, ಜೂನ್ 29, 2025ರಂದು ಮಹತ್ವದ ಬೆಳವಣಿಗೆಗಳು ನಡೆದಿವೆ.

 ಗಾಜಿಯಾಬಾದ್ ಪೊಲೀಸರು ಜೂನ್ 29, 2025ರಂದು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಬೆನ್ನಲ್ಲೇ ಕ್ರಮ ಕೈಗೊಂಡಿರುವ ಪೊಲೀಸರು ಯಶ್ ದಯಾಳ್‌ಗೆ ತನಿಖೆಗೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. “ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಯಾವುದೇ ವಿಳಂಬವಾಗಬಾರದು” ಎಂದು ಪೊಲೀಸರು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ತನಿಖೆಗೆ ಜುಲೈ 21, 2025ರವರೆಗೆ ಗಡುವು ನೀಡಲಾಗಿದ್ದು, ಇಂದಿರಾಪುರಂನ ಸರ್ಕಲ್ ಆಫೀಸರ್ (ಸಿಒ) ಈ ವಿಷಯದ ಬಗ್ಗೆ ವರದಿ ಸಲ್ಲಿಸಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ನೀಡಲಾಗಿದೆ.

ಸಂತ್ರಸ್ತೆಯ ಹೇಳಿಕೆಯ ಪ್ರಕಾರ, 2019ರಿಂದ ಯಶ್ ದಯಾಳ್ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಆರಂಭವಾಯಿತು. ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಬ್ಬರ ಮಾತುಕತೆ ಜೋರಾಗಿತ್ತು. “ಯಶ್ ನಮ್ಮ ಮದುವೆಯ ಬಗ್ಗೆ ಮಾತನಾಡಿದರು. ಅವರ ಕುಟುಂಬವನ್ನು ಸಹ ಭೇಟಿಯಾಗಿದ್ದೇನೆ. ಈ ಸಂಬಂಧದಲ್ಲಿ ನಾನು ಅನೇಕ ನಗರಗಳಿಗೆ ಯಶ್ ಜೊತೆ ಸುತ್ತಾಡಿದ್ದೇನೆ. ಆದರೆ, ಯಶ್ ನನ್ನನ್ನು ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಿದ್ದಾರೆ. ನಾನು ಆತನ ಉದ್ದೇಶವನ್ನು ಪ್ರಶ್ನಿಸಿದಾಗ, ದೈಹಿಕ ಹಿಂಸೆಗೆ ಒಳಗಾದೆ,” ಎಂದು ಸಂತ್ರಸ್ತೆ ತನ್ನ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆಯು ತನ್ನ ಆರೋಪಗಳನ್ನು ಬೆಂಬಲಿಸಲು ಚಾಟ್ ದಾಖಲೆಗಳು, ಸ್ಕ್ರೀನ್‌ಶಾಟ್‌ಗಳು, ವಿಡಿಯೋ ಕರೆ ರೆಕಾರ್ಡಿಂಗ್‌ಗಳು ಮತ್ತು ಫೋಟೋಗಳನ್ನು ಸಾಕ್ಷ್ಯವಾಗಿ ಸಲ್ಲಿಸಿದ್ದಾರೆ. ಜೂನ್ 14, 2025ರಂದು ಈಕೆ ಮಹಿಳಾ ಸಹಾಯವಾಣಿ (181)ಗೆ ಕರೆ ಮಾಡಿದ್ದರೂ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ನಿರಾಸೆಯಾದ ಈಕೆ, ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಆನ್‌ಲೈನ್ ದೂರು ಪೋರ್ಟಲ್ (ಐಜಿಆರ್‌ಎಸ್) ಮೂಲಕ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
27 ವರ್ಷದ ಯಶ್ ದಯಾಳ್ ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡದ ಪರ 15 ಪಂದ್ಯಗಳಲ್ಲಿ ಆಡಿ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಉತ್ತರ ಪ್ರದೇಶವನ್ನು ಪ್ರತಿನಿಧಿಸಿರುವ ಈ ಎಡಗೈ ವೇಗದ ಬೌಲರ್ ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಯ್ಕೆಯ ಸನಿಹದಲ್ಲಿದ್ದರು. ಆದರೆ, ಈ ಆರೋಪಗಳು ಆತನ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆರ್‌ಸಿಬಿ ತಂಡವು ಇದುವರೆಗೆ ಈ ಆರೋಪಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
Exit mobile version