ಅಮೆರಿಕ: ವಿಶ್ವ ಕುಸ್ತಿ ಇತಿಹಾಸದಲ್ಲಿ ಅತಿ ದೊಡ್ಡ ಹೆಸರುಗಳಲ್ಲಿ ಒಂದಾಗಿರುವ WWE ಸೂಪರ್ ಸ್ಟಾರ್ ಜಾನ್ ಸೀನಾ (John Cena) ತಮ್ಮ ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ರಿಂಗ್‌ನಲ್ಲಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದ ಸೀನಾ, ತಮ್ಮ ಅಂತಿಮ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಕುಸ್ತಿ ಬದುಕಿಗೆ ತೆರೆ ಎಳೆದಿದ್ದಾರೆ. ಈ ಕ್ಷಣ WWE ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ.
23 ವರ್ಷಗಳ ಕಾಲ WWE ರಿಂಗ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಾನ್ ಸೀನಾ, ಕೇವಲ ಕುಸ್ತಿಪಟುವಾಗಿರಲಿಲ್ಲ, ಅವರು ಒಂದು ಯುಗವೇ ಆಗಿದ್ದರು. ‘U Can’t See Me’ ಎಂಬ ಅವರ ಖ್ಯಾತ ಟ್ಯಾಗ್‌ಲೈನ್, ಬಣ್ಣದ ಟೋಪಿ, ಶಾರ್ಟ್ಸ್ ಮತ್ತು ಅವರ ಉತ್ಸಾಹಭರಿತ ಪ್ರವೇಶ ಶೈಲಿ, ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ.
ನಿನ್ನೆ ಶನಿವಾರ ನಡೆದ WWE ಮೇನ್ ಇವೆಂಟ್‌ನಲ್ಲಿ ಆಸ್ಟ್ರಿಯಾದ ಖ್ಯಾತ ಕುಸ್ತಿಪಟು ಗುಂಟರ್ (Gunther) ವಿರುದ್ಧ ಜಾನ್ ಸೀನಾ ತಮ್ಮ ಅಂತಿಮ ಪಂದ್ಯವನ್ನು ಆಡಿದರು. ಭಾರೀ ನಿರೀಕ್ಷೆಗಳ ನಡುವೆಯೇ ನಡೆದ ಈ ಪಂದ್ಯದಲ್ಲಿ ಸೀನಾ ಸೋಲನುಭವಿಸಿದರು. ಆದರೂ, ಸೋಲಿನ ನಡುವೆಯೂ ಅವರ ಆತ್ಮಸ್ಥೈರ್ಯ, ಕ್ರೀಡಾಸ್ಫೂರ್ತಿ ಮತ್ತು ಅಭಿಮಾನಿಗಳಲ್ಲಿ ಇರುವ ಗೌರವ ಎಲ್ಲರ ಮನ ಗೆದ್ದಿತ್ತು. 23 ವರ್ಷಗಳ ದೀರ್ಘ ಕರಿಯರ್ ಸೋಲಿನೊಂದಿಗೆ ಅಂತ್ಯಗೊಂಡರೂ, ಸೀನಾ ಪಡೆದ ಗೌರವ ಮತ್ತು ಪ್ರೀತಿ ಅಪ್ರತಿಮವಾಗಿದೆ.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣವನ್ನು ತುಂಬಿದ್ದರು. ಸೀನಾ ರಿಂಗ್‌ಗೆ ಕಾಲಿಟ್ಟಾಗಲೇ ‘Cena… Cena…’ ಎಂಬ ಘೋಷಣೆಗಳಿಂದ ವಾತಾವರಣ ತುಂಬಿ ತುಳುಕಿತ್ತು. ತಮ್ಮ ಕೊನೆಯ ಮ್ಯಾಚ್‌ನಲ್ಲೂ ‘U Can’t See Me’ ಸಿಗ್ನೇಚರ್ ಮೂವ್ ಪ್ರದರ್ಶಿಸಿ ಪ್ರೇಕ್ಷಕರಿಂದ ಭಾರೀ ಚಪ್ಪಾಳೆ ಗಳಿಸಿದರು.
ಈ ಕಾರ್ಯಕ್ರಮವನ್ನು ಇನ್ನಷ್ಟು ವಿಶೇಷಗೊಳಿಸಿದ್ದು WWE ದಿಗ್ಗಜರ ಉಪಸ್ಥಿತಿ. WWE ಹಾಲ್ ಆಫ್ ಫೇಮರ್‌ಗಳಾದ ಮಿಚೆಲ್ ಮೆಕೂಲ್ ಮತ್ತು ಟ್ರಿಶ್ ಸ್ಟ್ರಾಟಸ್ ರಿಂಗ್‌ಸೈಡ್‌ನಲ್ಲಿ ಹಾಜರಿದ್ದು ಸೀನಾಗೆ ಗೌರವ ಸಲ್ಲಿಸಿದರು. ಜೊತೆಗೆ ದಿ ರಾಕ್, ಕೇನ್ ಸೇರಿದಂತೆ ಹಲವು WWE ದಿಗ್ಗಜರು ಅಂತಿಮ ಪಂದ್ಯಕ್ಕೂ ಮುನ್ನ ಸೀನಾಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಪೂರ್ಣ ಅವಧಿಯಲ್ಲೂ ಜಾನ್ ಸೀನಾ ಅವರ ಸಾಧನೆಗಳನ್ನು ನೆನಪಿಸುವ ಹಲವು ವೀಡಿಯೊಗಳನ್ನು ಪ್ರದರ್ಶಿಸಲಾಯಿತು. ಅನೇಕ ಚಾಂಪಿಯನ್‌ಶಿಪ್‌ಗಳು, ಸ್ಮರಣೀಯ ಪಂದ್ಯಗಳು ಮತ್ತು ಅಭಿಮಾನಿಗಳೊಂದಿಗೆ ಸೀನಾಗೆ ಇರುವ ಆತ್ಮೀಯ ಬಾಂಧವ್ಯವನ್ನು ಈ ವೀಡಿಯೊಗಳು ಬಿಂಬಿಸಿದವು. ಈ ದೃಶ್ಯಗಳನ್ನು ನೋಡಿ ಜಾನ್ ಸೀನಾ ಕೂಡ ಭಾವುಕರಾದರು.
