ಮಹಿಳಾ ಟಿ20 ಏಷ್ಯಾಕಪ್ 2026 ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಆಗಸ್ಟ್ 28ರಿಂದ ಸೆಪ್ಟೆಂಬರ್ 13ರವರೆಗೆ ನಡೆಯಲಿದ್ದು, ಏಷ್ಯಾದ ಎಂಟು ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಟೂರ್ನಿಯ ದಿನಾಂಕಗಳನ್ನು ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.
ವರದಿಗಳ ಪ್ರಕಾರ, ಜುಲೈ 22ರಂದು ಎಸಿಸಿ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅಧಿಕೃತ ಇಮೇಲ್ ಕಳುಹಿಸಿದೆ. ಅದರಲ್ಲಿ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ಹಂಚಿಕೊಳ್ಳುವುದರ ಜೊತೆಗೆ, ಯುಎಇಯಲ್ಲಿ ನಡೆಯಲಿರುವ ಪಂದ್ಯಗಳ ಕ್ರೀಡಾಂಗಣಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ. ಇದೇ ವೇಳೆ, ಎಲ್ಲಾ ತಂಡಗಳು ಆಗಸ್ಟ್ 27ರೊಳಗೆ ಯುಎಇ ತಲುಪುವಂತೆ ಸೂಚನೆ ನೀಡಲಾಗಿದ್ದು, ಸೆಪ್ಟೆಂಬರ್ 13ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಉಲ್ಲೇಖಿಸಲಾಗಿದೆ.
ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ. ಅವರ ಅಂತಿಮ ಅನುಮೋದನೆಯ ನಂತರ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟವಾಗಲಿದೆ.
ಟೂರ್ನಿಯ ಸಿದ್ಧತೆಗಳು ವೇಗವಾಗಿ ಸಾಗುತ್ತಿರುವ ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಿಂದ ಒಂದು ಸಣ್ಣ ಎಡವಟ್ಟು ಕೂಡ ನಡೆದಿದೆ. ಇತ್ತೀಚೆಗೆ ಬಿಸಿಸಿಐ ಮಹಿಳಾ ಏಷ್ಯಾಕಪ್‌ಗಾಗಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿತ್ತು. ಈ ತಾತ್ಕಾಲಿಕ ತಂಡದಲ್ಲಿ ಪ್ರೇಮಾ ರಾವತ್ ಸೇರಿದಂತೆ ಹಲವು ಪ್ರಮುಖ ಆಟಗಾರ್ತಿಯರ ಹೆಸರುಗಳಿದ್ದವು. ಆದರೆ ಎಸಿಸಿ ಇನ್ನೂ ಅಧಿಕೃತವಾಗಿ ಟೂರ್ನಿಯ ವಿಂಡೋ ತೆರೆಯದ ಹಿನ್ನೆಲೆಯಲ್ಲಿ, ಬಿಸಿಸಿಐ ಕೆಲವೇ ಹೊತ್ತಿನಲ್ಲಿ ಆ ಪೋಸ್ಟ್ ಅನ್ನು ತನ್ನ ಸಾಮಾಜಿಕ ಜಾಲತಾಣಗಳಿಂದ ಅಳಿಸಿಹಾಕಿದೆ.
ಈ ಬಾರಿಯ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಮಲೇಷ್ಯಾ, ಥಾಯ್ಲೆಂಡ್ ಹಾಗೂ ಆತಿಥೇಯ ಯುಎಇ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಈ ತಂಡಗಳ ನಡುವಿನ ಹಣಾಹಣಿ ಏಷ್ಯಾದ ಮಹಿಳಾ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ.
ಆದರೆ ಈ ಟೂರ್ನಿಯ ವೇಳಾಪಟ್ಟಿಯು ಫೈನಲ್‌ಗೆ ತಲುಪುವ ತಂಡಗಳಿಗೆ ಮತ್ತೊಂದು ಸವಾಲನ್ನೂ ತಂದೊಡ್ಡಲಿದೆ. ಜಪಾನ್‌ನ ನಾಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಸ್ಪರ್ಧೆಗಳು ಸೆಪ್ಟೆಂಬರ್ 17ರಿಂದ 24ರವರೆಗೆ ನಡೆಯಲಿವೆ. ಏಷ್ಯಾಕಪ್ ಫೈನಲ್ ಮುಗಿದ ಕೇವಲ ನಾಲ್ಕು ದಿನಗಳಲ್ಲೇ ಆಟಗಾರ್ತಿಯರು ಯುಎಇಯಿಂದ ಜಪಾನ್‌ಗೆ ಪ್ರಯಾಣಿಸಿ ಅಲ್ಲಿನ ಹವಾಮಾನ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ. ಹೀಗಾಗಿ ವಿಶ್ರಾಂತಿಗೆ ಅತಿ ಕಡಿಮೆ ಸಮಯ ದೊರೆಯುವ ಕಾರಣ ಫೈನಲ್ ತಲುಪುವ ತಂಡಗಳ ಆಟಗಾರ್ತಿಯರ ಮೇಲೆ ದೈಹಿಕ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.
