2026ರ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ಗೆ ನಿನ್ನೆ ಅದ್ಧೂರಿಯಾಗಿ ತೆರೆಬಿದ್ದಿದ್ದು, ಇದೀಗ 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತ ಅಧಿಕೃತವಾಗಿ ಸ್ವೀಕರಿಸಿದೆ. ಸಮಾರೋಪ ಸಮಾರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ (CGF) ಧ್ವಜ ಹಾಗೂ ಆತಿಥ್ಯದ ಬ್ಯಾಟನ್ ಅನ್ನು ಭಾರತೀಯ ನಿಯೋಗಕ್ಕೆ ಹಸ್ತಾಂತರಿಸುವ ಮೂಲಕ ಅಹಮದಾಬಾದ್ ಆತಿಥ್ಯದ ಹೊಸ ಅಧ್ಯಾಯ ಆರಂಭವಾಗಿದೆ.
ಭಾರತದ ಪರವಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆ ಪಿ.ಟಿ. ಉಷಾ ಹಾಗೂ ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಆತಿಥ್ಯದ ಹಕ್ಕನ್ನು ಅಧಿಕೃತವಾಗಿ ಸ್ವೀಕರಿಸಿದರು. ಈ ಮೂಲಕ 2010ರ ನವದೆಹಲಿಯ ಬಳಿಕ ಭಾರತ ಎರಡನೇ ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಗೌರವಕ್ಕೆ ಪಾತ್ರವಾಗಿದೆ.
‘ಶತಮಾನದ ಕಾಮನ್‌ವೆಲ್ತ್’ಗೆ ಅಹಮದಾಬಾದ್ ಸಾಕ್ಷಿ
1930ರಲ್ಲಿ ಕೆನಡಾದ ಹ್ಯಾಮಿಲ್ಟನ್‌ನಲ್ಲಿ ಆರಂಭವಾದ ಕಾಮನ್‌ವೆಲ್ತ್ ಗೇಮ್ಸ್‌ಗೆ 2030ರಲ್ಲಿ 100 ವರ್ಷಗಳು ಪೂರ್ಣಗೊಳ್ಳಲಿವೆ. ಹೀಗಾಗಿ ಅಹಮದಾಬಾದ್‌ನಲ್ಲಿ ನಡೆಯಲಿರುವ ಈ ಆವೃತ್ತಿ ‘ಶತಮಾನದ ಕಾಮನ್‌ವೆಲ್ತ್ ಕ್ರೀಡಾಕೂಟ’ ಎಂಬ ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಹೆಚ್ಚು ಕ್ರೀಡೆಗಳು, ಹೆಚ್ಚಿನ ಸ್ಪರ್ಧೆಗಳು
2026ರ ಗ್ಲ್ಯಾಸ್ಗೋ ಗೇಮ್ಸ್‌ನಲ್ಲಿ ಕೇವಲ 10 ಕ್ರೀಡಾ ವಿಭಾಗಗಳಿದ್ದರೆ, 2030ರ ಅಹಮದಾಬಾದ್ ಗೇಮ್ಸ್‌ನಲ್ಲಿ 15 ರಿಂದ 17 ಕ್ರೀಡಾ ವಿಭಾಗಗಳನ್ನು ಸೇರಿಸಲು ಒಪ್ಪಿಗೆ ದೊರೆತಿದೆ. ಇದರಿಂದ ಹೆಚ್ಚಿನ ದೇಶಗಳು ಹಾಗೂ ಕ್ರೀಡಾಪಟುಗಳಿಗೆ ಅವಕಾಶ ದೊರೆಯಲಿದ್ದು, ಕ್ರೀಡಾಕೂಟದ ವೈಭವ ಮತ್ತಷ್ಟು ಹೆಚ್ಚಾಗುವುದರಲ್ಲಿ ಮತ್ತೊಂದು ಮಾತಿಲ್ಲ.
ಸಾಂಸ್ಕೃತಿಕ ವೈಭವದಿಂದ ವಿಶ್ವದ ಗಮನ ಸೆಳೆದ ಭಾರತ
ಧ್ವಜ ಹಸ್ತಾಂತರ ಸಮಾರಂಭದಲ್ಲಿ ಭಾರತದ ಶ್ರೀಮಂತ ಸಂಸ್ಕೃತಿಯನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು. ಖ್ಯಾತ ಗಾಯಕ ಶಂಕರ್ ಮಹದೇವನ್, ನಟಿ ಮಾನುಷಿ ಛಿಲ್ಲರ್ ಹಾಗೂ ಸಿತಾರ್ ವಾದಕ ರಿಷಭ್ ಶರ್ಮಾ ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಗೆದ್ದಿತು.
‘ವಂದೇ ಮಾತರಂ’ ಗೀತೆಯ 150ನೇ ವರ್ಷದ ನೆನಪಿನಲ್ಲಿ ನಡೆದ ಸಂಗೀತ ಕಾರ್ಯಕ್ರಮ ಹಾಗೂ ಸ್ಕಾಟಿಷ್ ಪೈಪರ್‌ಗಳೊಂದಿಗೆ ಜುಗಲ್‌ಬಂದಿ ವಿಶೇಷ ಆಕರ್ಷಣೆಯಾಗಿತ್ತು. ಅಹಮದಾಬಾದ್‌ನ ಪರಂಪರೆ, ಆಧುನಿಕತೆ ಹಾಗೂ ‘ವಸುಧೈವ ಕುಟುಂಬಕಂ’ ಸಂದೇಶವನ್ನು ಜಗತ್ತಿಗೆ ಪರಿಚಯಿಸುವ ವಿಶೇಷ ವಿಡಿಯೊ ಕೂಡ ಪ್ರದರ್ಶಿಸಲಾಯಿತು. ಈ ಮೂಲಕ ನಮ್ಮ ಭಾರತ ದೇಶದ ಸಾಂಸ್ಕ್ರತಿಕ ವೈಭವವನ್ನು ವಿಶದೆಲ್ಲೆಡೆ ಪಸರಿಸಿದಂತಾಗಿದೆ.
2036 ಒಲಿಂಪಿಕ್ಸ್ ಕನಸಿಗೆ ಬಲ
2030ರ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯು ಭಾರತದ 2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಆತಿಥ್ಯದ ಕನಸಿಗೆ ಮಹತ್ವದ ಬಲ ನೀಡಲಿದೆ. ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯ, ಸಂಘಟನಾ ಸಾಮರ್ಥ್ಯ ಮತ್ತು ಆತಿಥ್ಯವನ್ನು ಪ್ರದರ್ಶಿಸಲು ಈ ಕ್ರೀಡಾಕೂಟ ಉತ್ತಮ ವೇದಿಕೆಯಾಗಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಪ್ರಮುಖ ಸ್ಪರ್ಧಾ ಕೇಂದ್ರಗಳಾಗಲಿದ್ದು, ಈಗಾಗಲೇ ವಿಶ್ವಮಟ್ಟದ ಕ್ರೀಡಾ ಸೌಲಭ್ಯಗಳ ಅಭಿವೃದ್ಧಿ ವೇಗ ಪಡೆದುಕೊಂಡಿದೆ.
