India vs South Africa: ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಟಿಕೆಟ್ ಸೋಲ್ಡೌಟ್

Untitled design 2025 11 02t115245.644

ನವಿ ಮುಂಬೈ: ನವಿ ಮುಂಬೈಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ಕನಸು ಕಾಣುತ್ತಿವೆ. ಈ ಐತಿಹಾಸಿಕ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ ತಾರಕ್ಕೇರಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗುವ ಈ ಕಾಳಗಕ್ಕೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ನಡೆಯಲಿದೆ.

ಟಿಕೆಟ್‌ಗಳ ಬೇಡಿಕೆ ಹೆಚ್ಚಿವೆ. ಐಸಿಸಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಇದರಿಂದಾಗಿ ಅನಧಿಕೃತ ಮಾರ್ಗಗಳು ಸಕ್ರಿಯಗೊಂಡಿವೆ. ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ಟಿಕೆಟ್‌ಗಳನ್ನು ₹16,500ರಿಂದ ₹1,36,000 ವರೆಗೆ ಮಾರಾಟ ಮಾಡುತ್ತಿವೆ. ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಬೆಲೆ ₹1 ಲಕ್ಷ ದಾಟಿದೆ! ಶನಿವಾರ ಕ್ರೀಡಾಂಗಣದ ಎದುರು ಸಾವಿರಾರು ಅಭಿಮಾನಿಗಳು ಟಿಕೆಟ್ ಹುಡುಕಾಟದಲ್ಲಿ ಓಡಾಡಿದ್ದರು. ಭಾರತ ನಾಯಕಿ ಹರ್ಮನ್‌ಪ್ರೀತ್ ಕೌರ್ ಪತ್ರಿಕಾಗೋಷ್ಠಿಯಲ್ಲಿ, “ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಟಿಕೆಟ್ ಒದಗಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಹೇಳಿದರು.

ಬಹುಮಾನ ಮೊತ್ತದಲ್ಲಿ ದಾಖಲೆ

ಐಸಿಸಿ ಈ ಬಾರಿ ಮಹಿಳಾ ವಿಶ್ವಕಪ್ ಬಹುಮಾನವನ್ನು ಭಾರೀ ಏರಿಕೆ ಮಾಡಿದೆ. ಗೆಲ್ಲುವ ತಂಡಕ್ಕೆ 4.48 ಮಿಲಿಯನ್ ಯುಎಸ್ ಡಾಲರ್ (ಸುಮಾರು ₹39.77 ಕೋಟಿ), ರನ್ನರ್-ಅಪ್‌ಗೆ 2.24 ಮಿಲಿಯನ್ ಡಾಲರ್ (ಸುಮಾರು ₹19.88 ಕೋಟಿ) ಸಿಗಲಿದೆ. ಪುರುಷ ಮತ್ತು ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಇದು ಗರಿಷ್ಠ ಮೊತ್ತ. 2024ರ ಪುರುಷರ ಟಿ20 ವಿಶ್ವಕಪ್ ಗೆಲುವಿಗೆ ₹125 ಕೋಟಿ ನೀಡಿದ್ದ ಬಿಸಿಸಿಐ, ಮಹಿಳಾ ತಂಡ ಗೆದ್ದರೆ ಅದೇ ಮೊತ್ತ ನೀಡಲು ಸಿದ್ಧವಿದೆ ಎಂಬ ವರದಿ ಬಂದಿದೆ.

ಭಾರತಕ್ಕೆ ಇದು ಮೂರನೇ ಏಕದಿನ ವಿಶ್ವಕಪ್ ಫೈನಲ್. 2005 ಮತ್ತು 2017ರಲ್ಲಿ ಸೋತಿದ್ದ ತಂಡ, 2020ರ ಟಿ20 ಫೈನಲ್‌ನಲ್ಲೂ ಮುಗ್ಗರಿಸಿತ್ತು. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಏಕದಿನ ಫೈನಲ್‌ಗೇರಿದೆ. ಆದರೆ ಕಳೆದ ಎರಡು ಟಿ20 ವಿಶ್ವಕಪ್ ಫೈನಲ್‌ಗಳಲ್ಲಿ ರನ್ನರ್-ಅಪ್ ಆಗಿತ್ತು. ಎರಡೂ ತಂಡಗಳು ಚೊಚ್ಚಲ ಗೆಲುವಿನ ಹುಚ್ಚಿನಲ್ಲಿವೆ.

Exit mobile version